ಕುಶಾಲನಗರ, ಡಿ . 1: ಜೀವನದಿ ಕಾವೇರಿಯ ಸಂರಕ್ಷಣೆಗಾಗಿ ಸರಕಾರ ಗಳು ಶಾಶ್ವತ ಯೋಜನೆ ರೂಪಿಸುವದರೊಂದಿಗೆ ಸಮರ್ಪಕ ಅನುಷ್ಠಾನಕ್ಕೆ ಕೇಂದ್ರ ಸರಕಾರ ಕ್ರಿಯಾಯೋಜನೆ ರೂಪಿಸಬೇಕಿದೆ ಎಂದು ಗಣ್ಯರು ಆಗ್ರಹ ವ್ಯಕ್ತಪಡಿಸಿದ್ದಾರೆ.

ಕಾವೇರಿ ರಿವರ್ ಸೇವಾ ಟ್ರಸ್ಟ್, ಕಾವೇರಿ ನದಿ ಸ್ವಚ್ಛತಾ ಆಂದೋಲನ, ಮಾತೆ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ನದಿ ತಟದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಕಾವೇರಿ ನದಿ ಹಬ್ಬ-2019 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಪ್ರಮುಖರು, ಜೀವದಾತೆ ಕಾವೇರಿಯ ಋಣ ತೀರಿಸುವಲ್ಲಿ ಪ್ರತಿಯೊಬ್ಬರೂ ಪಣ ತೊಡಬೇಕಿದೆ ಎಂದು ಕರೆ ನೀಡಿದರು. ನದಿ ನೀರಿನ ನೇರ ಕಲುಷಿಕೆ ತಪ್ಪಿಸಿ ಕಾವೇರಿ ತಟಗಳ ಅಭಿವೃದ್ಧಿಯೊಂದಿಗೆ ನದಿ ನೀರಿನ ಹರಿವಿಗೆ ಯಾವದೇ ಅಡ್ಡಿಯುಂ ಟಾಗದಂತೆ ಎಚ್ಚರವಹಿಸುವದು, ಉತ್ತರದ ವಾರಣಾಸಿಯ ಗಂಗಾ ಮಾದರಿಯಂತೆ ಕಾವೇರಿ ನದಿ ಸಂರಕ್ಷಣೆಗೆ ರಿವರ್ ಪೊಲೀಸ್ ವಿಭಾಗ ಸ್ಥಾಪನೆಯೊಂದಿಗೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವದು. ಸ್ಥಳೀಯ ಜನರ ಅಭಿವೃದ್ಧಿಗೆ ವೈಜ್ಞಾನಿಕ ರೀತಿಯಲ್ಲಿ ಪ್ರವಾಸೋದ್ಯಮ ಮತ್ತಿತರ ಪರಿಸರ ಪೂರಕ ಯೋಜನೆಗಳನ್ನು ರೂಪಿಸಲು ನಿರ್ಣಯ ಕೈಗೊಳ್ಳಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಬೋಧ ಸ್ವರೂಪಾನಂದ ಸ್ವಾಮೀಜಿ, ಪವಿತ್ರ ನದಿಗಳನ್ನು ಹೊಂದಿರುವ ಭಾರತದಲ್ಲಿ ಪ್ರಸಕ್ತ ನದಿಗಳನ್ನು ಸಂರಕ್ಷಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿರುವದು ವಿಷಾದಕರ ಸಂಗತಿಯಾಗಿದೆ. ಪ್ರತಿಯೊಬ್ಬರೂ ಕೂಡ ನದಿಗಳ ಸಂರಕ್ಷಣೆಗೆ ಮುಂದಾಗುವದು ಅವಶ್ಯಕ ಎಂದರು.

ಸಿದ್ದಲಿಂಗಪುರದ ಶ್ರೀ ರಾಜೇಶನಾಥ ಜಿ ಮಾತನಾಡಿ, ಕಾವೇರಿ ಸಂರಕ್ಷಣೆ ಪ್ರಜ್ಞಾವಂತ ನಾಗರಿಕರಿಂದ ಮಾತ್ರ ಸಾಧ್ಯ. ನದಿಯನ್ನು ಕಾಳಜಿ ವಹಿಸಿ ಸಂರಕ್ಷಿಸುವದರೊಂದಿಗೆ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ, ನದಿಗಳ ಸಂರಕ್ಷಣೆ ನಿಟ್ಟಿನಲ್ಲಿ ಸರಕಾರ ನದಿಗಳಿಗೆ ಶಾಸನಬದ್ಧವಾದ ಜೀವಂತ ವ್ಯಕ್ತಿಯ ಸ್ಥಾನಮಾನ ಕಲ್ಪಿಸುವಂತಾಗಬೇಕು. ಈ ಮೂಲಕ ನದಿ ನೀರಿನ, ನದಿ ತಟಗಳ ರಕ್ಷಣೆ ಸಾಧ್ಯ ಎಂದರು.

ಪ್ರಜಾಸತ್ಯ ದಿನಪತ್ರಿಕೆ ಸಂಪಾದಕ ಡಾ.ಬಿ.ಸಿ.ನವೀನ್ ಕುಮಾರ್ ಮಾತನಾಡಿ, ತಲಕಾವೇರಿಯಿಂದ ಪೂಂಪ್‍ಹಾರ್ ತನಕ ಕಾವೇರಿ ಹರಿಯುವ ತಟದ ಜನತೆ ಎಚ್ಚೆತ್ತುಕೊಂಡಲ್ಲಿ ನದಿ ಸಂರಕ್ಷಣೆಗೆ ಶಾಶ್ವತ ಪರಿಹಾರ ದೊರಕಲು ಸಾಧ್ಯ ಎಂದರು.

ಹಿರಿಯ ನ್ಯಾಯವಾದಿ, ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಎಂ.ಟಿ.ನಾಣಯ್ಯ ಮಾತನಾಡಿ, ತಲಕಾವೇರಿಯಲ್ಲಿ ತೀರ್ಥೋದ್ಭವ ದಿನ ಮಾತ್ರ ಕಾವೇರಿ ಜಲಕ್ಕೆ ಪವಿತ್ರ ಸ್ಥಾನ ಲಭಿಸುತ್ತಿದೆ. ನಂತರದ ದಿನಗಳಲ್ಲಿ ಕಸ, ತ್ಯಾಜ್ಯಗಳ ಕೇಂದ್ರವಾಗುತ್ತಿರುವದು ದುರಂತದ ಸಂಗತಿಯಾಗಿದೆ ಎಂದರು. ನದಿಮೂಲಗಳಿಗೆ ಅಡ್ಡಿಯುಂಟು ಮಾಡುತ್ತಿರುವ ಕಾರಣ ಬಹುತೇಕ ಕಡೆಗಳಲ್ಲಿ ಅಂತರ್ಜಲ ಕುಸಿತ ಉಂಟಾಗುತ್ತಿದ್ದು, ಶುದ್ದ ಕುಡಿವ ನೀರಿಗೆ ಹಾಹಾಕಾರ ಎದುರಾಗುತ್ತಿದೆ ಎಂದರು.

ಈ ಸಂದರ್ಭ ನದಿ ಸಂರಕ್ಷಣೆ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿರುವ ಸಮಿತಿ ಪ್ರಮುಖರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಎಂ.ಎನ್. ಚಂದ್ರ ಮೋಹನ್ ಪ್ರಾಸ್ತಾವಿಕ ನುಡಿಗಳಾಡಿದರು.

ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿಗಳ ಒಕ್ಕೂಟದ ಅಧ್ಯಕ್ಷ ಎಂ.ಕೆ.ದಿನೇಶ್, ನದಿ ಜಾಗೃತಿ ಸಮಿತಿ ಪ್ರಮುಖರಾದ ಡಿ.ಆರ್. ಸೋಮ ಶೇಖರ್, ಮಂಡೇಪಂಡ ಬೋಸ್ ಮೊಣ್ಣಪ್ಪ, ಕೆ.ಆರ್. ಶಿವಾನಂದನ್, ಕೆ.ಜಿ.ಮನು, ಎಂ.ಬಿ.ಜೋಯಪ್ಪ, ಡಾ.ಎಂ.ಎನ್. ಕುಮಾರಸ್ವಾಮಿ, ಸಿದ್ದರಾಜು, ಆರತಿ ಬಳಗದ ವನಿತಾ ಚಂದ್ರಮೋಹನ್ ಮತ್ತಿತರರು ಇದ್ದರು. ಪ್ರಾಂಶುಪಾಲ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ವೇದಿಕೆ ಕಾರ್ಯಕ್ರಮ ಬಳಿಕ ನದಿಗೆ ಮಹಾ ಆರತಿ ಬೆಳಗಲಾಯಿತು. ನಂತರ ಕಾವೇರಿ ಕಲಾಪರಿಷತ್, ಟೀಂ ಆಟಿಟ್ಯೂಡ್ ಮತ್ತು ಸ್ಥಳೀಯ ನೃತ್ಯ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗುವದರೊಂದಿಗೆ ಎರಡು ದಿನಗಳ ಕಾವೇರಿ ನದಿ ಹಬ್ಬ ಸಮಾರಂಭ ತೆರೆ ಕಂಡಿತು.