ಮಡಿಕೇರಿ, ಡಿ. 1: ಶಿಕ್ಷಕರು ಹಾಗೂ ಪೋಷಕರ ಮಾರ್ಗದರ್ಶನ ದಲ್ಲಿ ಶಿಕ್ಷಣದ ಗುರಿ ಸಾಧಿಸುವ ಮೂಲಕ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಬೇಕು ಎಂದು ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ.ಜಗತ್ ತಿಮ್ಮಯ್ಯ ಕಿವಿಮಾತು ಹೇಳಿದ್ದಾರೆ.
ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ 21ನೇ ವಾರ್ಷಿಕೋತ್ಸವದ ಪ್ರಯುಕ್ತ ಶಾಲಾ ಸಭಾಂಗಣದಲ್ಲಿ ನಡೆದ ವಿಜ್ಞಾನ ಮಾದರಿ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಬದುಕು ಉಜ್ವಲವಾಗಬೇಕೆಂದು ಪೋಷಕರು ಹಾಗೂ ಶಿಕ್ಷಕರು ಅವಿರತ ಶ್ರಮ ಪಡುತ್ತಾರೆ.
ವಿದ್ಯಾರ್ಥಿಗಳು ಇದಕ್ಕೆ ಪ್ರತಿಯಾಗಿ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಶೈಕ್ಷಣಿಕ ಸಾಧನೆಯ ಮೂಲಕ ಮನೆ ಹಾಗೂ ಶಾಲೆಗೆ ಕೀರ್ತಿ ತರಬೇಕು ಎಂದರು.
ಪ್ರಸ್ತುತ ದಿನಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಓದುವದರಿಂದ ಜ್ಞಾನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದೆಂದು ಡಾ. ಜಗತ್ ತಿಮ್ಮಯ್ಯ ಅಭಿಪ್ರಾಯಪಟ್ಟರು.
ಕೊಡಗಿನ ಹೆಮ್ಮೆಯ ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರು ಶಿಸ್ತು ಬದ್ಧ ಜೀವನ ನಡೆಸುವ ಮೂಲಕ ಮಾದರಿ ವ್ಯಕ್ತಿಗಳಾಗಿದ್ದರು. ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಜೀವನದಲ್ಲಿ ಇಬ್ಬರು ಸೇನಾನಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯ ಬೇಕು ಎಂದು ಸಲಹೆ ನೀಡಿದರು. ಮೊಬೈಲ್ ಫೋನ್‍ಗಳಲ್ಲಿ ಕಾಲಹರಣ ಮಾಡದೆ ಪಠ್ಯ ಚಟುವಟಿಕೆಯೊಂದಿಗೆ ಕ್ರೀಡೆಗಳ ಬಗ್ಗೆಯೂ ಆಸಕ್ತಿ ತೋರಿದರೆ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬಹುದು ಎಂದು ಡಾ. ಜಗತ್ ತಿಮ್ಮಯ್ಯ ತಿಳಿಸಿದರು.
ತಮ್ಮ ವೈಯಕ್ತಿಕ ಸ್ವಚ್ಛತೆಯ ಜೊತೆಗೆ ಸುತ್ತಮುತ್ತಲಿನ ಪರಿಸರವನ್ನೂ ಸ್ವಚ್ಛವಾಗಿಟ್ಟಾಗ ಆರೋಗ್ಯವಂತ ಜೀವನ ನಡೆಸಬಹುದು ಎಂದರು.
ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಕಾರ್ಯಾಧ್ಯಕ್ಷರು ಹಾಗೂ ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷ ಚೋವಂಡ ಡಿ. ಕಾಳಪ್ಪ ಮಾತನಾಡಿ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಯಶಸ್ಸಿನತ್ತ ಸಾಗುತ್ತಿರುವುದು ಶ್ಲಾಘನೀಯ, ಮಕ್ಕಳ ಸಾಧನೆಗೆ ಪೋಷಕರ ಪ್ರೋತ್ಸಾಹ ಅಗತ್ಯವೆಂದರು. ಮಕ್ಕಳ ಆಸಕ್ತಿಯ ವಿಷಯಗಳನ್ನು ಅರಿತುಕೊಳ್ಳುವ ಮೂಲಕ ಅವುಗಳಿಗೆ ಹೆಚ್ಚು ಉತ್ತೇಜನ ನೀಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕ್ರೀಡೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ವಿಜ್ಞಾನದ ಮಾದರಿಗಳನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳು ಅತಿಥಿಗಳ ಮೆಚ್ಚುಗೆಗೆ ಪಾತ್ರರಾದರು. ಶಾಲೆಯ ಪ್ರಾಂಶುಪಾಲೆ ಬಿ.ಎಂ. ಸರಸ್ವತಿ, ಆಡಳಿತಾಧಿಕಾರಿ ಎಂ.ಎ. ಪೊನ್ನಮ್ಮ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.