ಸೋಮವಾರಪೇಟೆ, ಡಿ. 2: ಕಾಫಿ ತೋಟ ಸೇರಿದಂತೆ ಕಟ್ಟಡ ನಿರ್ಮಾಣ ಕೆಲಸಕ್ಕಾಗಿ ಕಳೆದ ಕೆಲ ದಶಕಗಳಿಂದ ಕೊಡಗಿಗೆ ಆಗಮಿಸುತ್ತಿರುವ ಅಸ್ಸಾಮಿಗರು ಇದೀಗ ಕೂಲಿ ಕೆಲಸ ಬದಿಗೊತ್ತಿ, ವ್ಯಾಪಾರಕ್ಕೆ ಇಳಿದಿದ್ದಾರೆ.

ಕೊಡಗಿನಲ್ಲಿ ಅಸ್ಸಾಮಿಗರ ಹೆಸರಿನಲ್ಲಿ ಬಾಂಗ್ಲಾ ನುಸುಳುಕೋರರು ಬೀಡುಬಿಟ್ಟಿರುವ ಬಗ್ಗೆ ಹಲವಷ್ಟು ಸಂಘಟನೆಗಳು ಸಂಶಯ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ಇದೀಗ ಸೋಮವಾರಪೇಟೆ ಪಟ್ಟಣದ ಸಂತೆಯಲ್ಲಿ ಅಸ್ಸಾಮಿಗರು ಬಗೆಬಗೆಯ ವಸ್ತುಗಳನ್ನು ವ್ಯಾಪಾರ ಮಾಡುತ್ತಿದ್ದಾರೆ.

ಕಾಫಿ ತೋಟದ ಲೈನ್‍ಮನೆಗಳಲ್ಲಿಯೇ ಬಹುತೇಕವಾಗಿ ನೆಲೆಸಿರುವ ಅಸ್ಸಾಮಿಗರು ವಾರದ ಸಂತೆ ದಿನವಾದ ಸೋಮವಾರದಂದು ಇಲ್ಲಿನ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರ ಪ್ರಾರಂಭಿಸಿದ್ದಾರೆ. ಸ್ಥಳೀಯ ವ್ಯಾಪಾರಸ್ಥರು ಅಸ್ಸಾಮಿಗರ ವ್ಯಾಪಾರವನ್ನು ನೋಡಿ ಚಕಿತರಾಗಿದ್ದಾರೆ. ಸಂತೆಯಲ್ಲಿ ಬಗೆಬಗೆಯ ತಿಂಡಿ ತಿನಿಸುಗಳು, ಹೊರ ರಾಜ್ಯದ ಬೀಡಿ ಕಟ್ಟುಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ತಮ್ಮ ಭಾಷೆಯ ಮೂಲಕವೇ ವ್ಯಾಪಾರ ಮಾಡುತ್ತಿದ್ದಾರೆ. ಸ್ಥಳೀಯವಾಗಿ ಲಭ್ಯವಿರದ ಬೀಡಿಗಳನ್ನು ಮಾರಾಟ ಮಾಡುತ್ತಿದ್ದು, ಯಾವ ರಾಜ್ಯದಿಂದ ಹೇಗೆ ಬಂದವು ಎಂಬ ಬಗ್ಗೆ ಸಂಶಯ ಮೂಡಿದೆ.

ಸಂತೆಯಲ್ಲಿ ಮಾರಾಟ ಮಾಡಲು ಪಟ್ಟಣ ಪಂಚಾಯಿತಿಗೆ ಸುಂಕ ನೀಡಬೇಕಿದ್ದು, ಇವರುಗಳು ಸುಂಕ ನೀಡುತ್ತಿದ್ದಾರೆಯೇ? ಎಂಬ ಬಗ್ಗೆ ಮಾಹಿತಿ ಇಲ್ಲವಾಗಿದೆ ಎಂದು ಸ್ಥಳೀಯ ವರ್ತಕರಾದ ಸಂತೋಷ್ ಅಭಿಪ್ರಾಯಿಸಿದ್ದಾರೆ.

ಇದರೊಂದಿಗೆ ಅಸ್ಸಾಮಿಗರು ಕೋಳಿ ಮರಿಗಳನ್ನು ಗ್ರಾಮೀಣ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದಾರೆ. ಬುಟ್ಟಿಯಲ್ಲಿ ಕೋಳಿ ಮರಿಗಳನ್ನು ಇಟ್ಟುಕೊಂಡು ವಾರದ ಇತರ ದಿನಗಳಲ್ಲಿ ಪಟ್ಟಣದ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಿಗೆ ತೆರಳಿ ವ್ಯಾಪಾರ ಮಾಡುತ್ತಿದ್ದಾರೆ. ಜಿಲ್ಲೆಗೆ ಆಗಮಿಸಿದ ಕೆಲವೇ ಸಮಯದಲ್ಲಿ ಸ್ಥಳೀಯವಾಗಿ ವ್ಯಾಪಾರ ವಹಿವಾಟು ಆರಂಭಿಸಿರುವ ಅಸ್ಸಾಮಿಗರನ್ನು ಕಂಡು ಸ್ಥಳೀಯ ವರ್ತಕರು ಹುಬ್ಬೇರಿಸುತ್ತಿದ್ದಾರೆ.

ಕಾಫಿ ತೋಟ ಮತ್ತು ಕಟ್ಟಡ ಕಾರ್ಮಿಕರಾಗಿ ಜಿಲ್ಲೆಗೆ ಬಂದಿರುವ ಇವರು ನಿಧಾನವಾಗಿ ವ್ಯಾಪಾರವನ್ನು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಸ್ಥಳೀಯ ವರ್ತಕರಿಗೆ ಪೈಪೋಟಿ ನೀಡುವದರಲ್ಲಿ ಸಂಶಯವಿಲ್ಲ. ಪೂರ್ವಾಪರವಿಲ್ಲದ ಇವರುಗಳು ವ್ಯಾಪಾರದಲ್ಲಿ ಇಷ್ಟು ಬೇಗ ತೊಡಗಿಸಿಕೊಂಡಿರುವದು ಆಶ್ಚರ್ಯವೇ ಸರಿ ಎಂದು ಸಂತೆ ವ್ಯಾಪಾರಿಗಳಾದ ರಮೇಶ್, ಸದಾನಂದ, ಲೀಲಮ್ಮ ಸೇರಿದಂತೆ ಇತರರು ಅಭಿಪ್ರಾಯಿಸಿದ್ದಾರೆ.