ಸೋಮವಾರಪೇಟೆ, ಡಿ. 2: ಕಾಫಿ ಬೆಳೆಗಾರರು ತಮ್ಮ ತೋಟದ ಕೆಲಸಗಳಿಗೆ ವಾಹನಗಳಲ್ಲಿ ಕಾರ್ಮಿಕರನ್ನು ಸಾಗಾಟಗೊಳಿಸುವ ಸಂದರ್ಭ, ಕಾನೂನು ನಿರ್ಬಂಧದ ನೆಪವೊಡ್ಡಿ ದಂಡ ವಿಧಿಸುತ್ತಿರುವದನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿ ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದರು.
ಒಂದು ವೇಳೆ ಇದೇ ರೀತಿ ಮುಂದುವರೆದರೆ ತಾಲೂಕಿನಾದ್ಯಂತ ಹೋರಾಟ ಸಂಘಟಿಸುವ ಬಗ್ಗೆ ಎಚ್ಚರಿಕೆ ನೀಡಿದ ರೈತ ಮತ್ತು ಕಾರ್ಮಿಕರ ಹೋರಾಟ ಸಮಿತಿಯ ಸದಸ್ಯರುಗಳು, ಕಾರ್ಮಿಕರನ್ನು ಸಾಗಾಟಗೊಳಿಸುವ ವಾಹನಗಳಿಗೆ ತಡೆಯೊಡ್ಡಿದರೆ ತಾ. 7 ರಂದು ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ನಿರಂತರ ಹೋರಾಟ ನಡೆಸುವದಾಗಿ ಎಚ್ಚರಿಸಿದರು.
ಬೆಳಿಗ್ಗೆ ಪಟ್ಟಣದ ಮಹಿಳಾ ಸಮಾಜದಲ್ಲಿ ಸಭೆ ಸೇರಿದ ಬೆಳೆಗಾರರು ಹಾಗೂ ವಾಹನ ಕಾರ್ಮಿಕರು, ಪೊಲೀಸ್ ಇಲಾಖೆಯ ಕ್ರಮದಿಂದಾಗಿ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಿದರು.
ತೋಟ ಮಾಲೀಕರು ತಮ್ಮ ತೋಟದ ಕೆಲಸಗಳಿಗೆ ಕಾರ್ಮಿಕರನ್ನು ತಮ್ಮ ಸ್ವಂತ ಪಿಕ್ಅಪ್ ಮತ್ತು ಜೀಪ್ಗಳಲ್ಲಿ ಸಾಗಾಟಗೊಳಿಸುವ ಸಂದರ್ಭ ಪೊಲೀಸರು ಕಾನೂನಿನ ನೆಪವೊಡ್ಡಿ ವಾಹನಗಳನ್ನು ತಡೆಯುತ್ತಿದ್ದಾರೆ. ಇದರೊಂದಿಗೆ ವಾಹನವನ್ನು ಮುಟ್ಟುಗೋಲು ಹಾಕಿಕೊಂಡು ಮೊಕದ್ದಮೆ ದಾಖಲಿಸುವದರೊಂದಿಗೆ ಭಾರೀ ಪ್ರಮಾಣದ ದಂಡ ವಿಧಿಸುತ್ತಿರು ವದರಿಂದ ಬೆಳೆಗಾರರು ತೊಂದರೆಗೆ ಸಿಲುಕುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಈಗಾಗಲೇ ಹವಾಮಾನ ವೈಪರೀತ್ಯ, ಕುಸಿದ ಬೆಲೆ, ನೆಲಕ್ಕಚ್ಚುತ್ತಿರುವ ಫಸಲಿನಿಂದಾಗಿ ಬೆಳೆಗಾರರು ಹಾಗೂ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಈ ಮಧ್ಯೆ ಕಾರ್ಮಿಕರ ಸಾಗಾಟಕ್ಕೆ ತಡೆಯೊಡ್ಡಿ ದಂಡ ವಿಧಿಸುತ್ತಿರುವದರಿಂದ ತೋಟ ಮಾಲೀಕರು ಹೈರಾಣಾಗುತ್ತಿದ್ದಾರೆ. ಇದಕ್ಕೆ ಸಂಘಟಿತ ಹೋರಾಟ ರೂಪಿಸಬೇಕೆಂಬ ಅಭಿಪ್ರಾಯ ಕೇಳಿಬಂದಿತು.
ನಂತರ ಇಲ್ಲಿನ ಪೊಲೀಸ್ ಠಾಣೆಗೆ ತೆರಳಿದ ಬೆಳೆಗಾರರು ಹಾಗೂ ಕಾರ್ಮಿಕರು ಎಎಸ್ಐ ಪುಟ್ಟಪ್ಪ ಅವರಿಗೆ ಮನವಿ ಸಲ್ಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ನಂತರ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭ ತಾಲೂಕು ಕಾಫಿ ಬೆಳೆಗಾರರ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಸಿ. ಮುದ್ದಪ್ಪ, ಕೃಷಿಕ ಸಮಾಜದ ಅಧ್ಯಕ್ಷ ತಾಕೇರಿ ಪೊನ್ನಪ್ಪ, ತಾ.ಪಂ. ಸದಸ್ಯ ಬಿ.ಎ. ಧರ್ಮಪ್ಪ, ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್ಕುಮಾರ್, ಪ್ರಮುಖರಾದ ಬಗ್ಗನ ತಮ್ಮಯ್ಯ, ಡಾಲಿ ಪ್ರಕಾಶ್, ತ್ರಿಶೂಲ್, ಹರೀಶ್, ಸುದೀಪ್ ಸೇರಿದಂತೆ ಬೆಳೆಗಾರರು ಹಾಗೂ ವಾಹನ ಮಾಲೀಕರು, ಕಾರ್ಮಿಕರು ಇದ್ದರು.