ಮಡಿಕೇರಿ, ನ. 30: ಭಾರತದಲ್ಲಿ ಅಮೇರಿಕಾ ರಾಯಭಾರಿಯಾಗಿರುವ ಕೆನೆತ್ ಐ. ಜಸ್ಟರ್ ಅವರು ದುಬಾರೆಯ ಆನೆ ಶಿಬಿರವನ್ನು ಶುಕ್ರವಾರ ಭೇಟಿ ಮಾಡಿ ವೀಕ್ಷಿಸಿದರು. ಮೈಸೂರು ಅರಮನೆಯ ವೀಕ್ಷಣೆ ನಡೆಸಿದ ನಂತರ ಅವರು ಕೊಡಗಿನ ದುಬಾರೆ ಸಾಕಾನೆ ಶಿಬಿರಕ್ಕೆ ತೆರಳಿ ಅಲ್ಲಿನ ಆನೆಗಳೊಡನೆ ಛಾಯಾಚಿತ್ರಗಳನ್ನು ತೆಗೆಸಿಕೊಂಡು ಮಾವುತರೊಂದಿಗೆ ಮಾತನಾಡಿ, ಆನೆಗಳನ್ನು ಪಳಗಿಸುವ ಬಗ್ಗೆ ಮಾಹಿತಿ ಪಡೆದುಕೊಂಡರು.
ನಂತರ ಚೆಟ್ಟಳ್ಳಿಯ ಪ್ರಾದೇಶಿಕ ಕಾಫಿ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಕಾಫಿ ಸವಿದರು. ಸಾಮಾಜಿಕ ಜಾಲತಾಣ ಟ್ವಿಟರ್‍ನಲ್ಲಿ ಅವರು ದುಬಾರೆಯ ಸಾಕಾನೆ ಶಿಬಿರದಲ್ಲಿ ತಾವು ಕಳೆದ ಸಮಯ ಅತ್ಯದ್ಭುತವಾಗಿದ್ದುದಾಗಿ ಹಾಗೂ ಅಲ್ಲಿ ಹೊಸ ಗೆಳೆಯರನ್ನು ಮಾಡಿಕೊಂಡಿರುವದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಕಾಫಿ ಮಾಡುವ ವಿಧಾನ ತಿಳಿಯುವದರೊಂದಿಗೆ ಅದ್ಭುತವಾದ ಕಾಫಿಯನ್ನು ಕಾಫಿ ಪ್ರಾದೇಶಿಕ ಸಂಶೋಧನಾ ಕೇಂದ್ರದಲ್ಲಿ ಸವಿದಿರುವದಾಗಿಯೂ ಅವರು ಟ್ವಿಟರ್‍ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.