ಕೂಡಿಗೆ, ನ. 28: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದಲ್ಲಿರುವ ಶ್ರೀ ಉದ್ಭವ ಬಸವೇಶ್ವರ ದೇವಾಲಯ ಸಮಿತಿಯ ವತಿಯಿಂದ ವಾರ್ಷಿಕ ಪೂಜೋತ್ಸವ ಹಾಗೂ ಕಡೆಯ ಕಾರ್ತಿಕ ಪೂಜಾ ಕಾರ್ಯಕ್ರಮ ನಡೆಯಿತು. ಇದರ ಅಂಗವಾಗಿ ಶ್ರೀ ಬಸವೇಶ್ವರ, ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಹೋಮ ಹವನಗಳು ನಡೆದವು.

ವಾರ್ಷಿಕವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ದೇವಾಲಯವನ್ನು ವಿಶೇಷ ಹೂವಿನಿಂದ ಅಲಂಕರಿಸಿದ್ದು ವಿಶೇಷವಾಗಿತ್ತು. ಡೈರಿ ರಾಮೇಗೌಡ, ರಂಜಿತ್ ಅನ್ನದಾನ ಕಲ್ಪಿಸಿದ್ದರು. ಪೂಜೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳಾದ ಚಿಕ್ಕತ್ತೂರು, ಹಾರಂಗಿ, ಕೂಡುಮಂಗಳೂರು, ಕೂಡಿಗೆ ಬಸವತ್ತೂರು ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಡಿ.ಎಲ್. ಮಂಜುನಾಥ, ಉಪಾಧ್ಯಕ್ಷ ಯೋಗೇಶ್, ಖಜಾಂಚಿ ಸುರೇಶ್, ಕಾರ್ಯದರ್ಶಿ ಬಸವರಾಜು, ಸಹಕಾರ್ಯದರ್ಶಿ ಜಯರಾಮ ಸೇರಿದಂತೆ ಸಮಿತಿಯ ನಿರ್ದೇಶಕರಾದ ಪಾಪ, ಮಲೇಶ್, ಸುಬ್ರಮಣಿ, ಚಂದ್ರ, ವಾಸು, ಯೋಗೇಶ್, ಅಶ್ವತ್, ಶೇಖರ್ ಮೊದಲಾದವರು ಹಾಜರಿದ್ದರು.