ಬ್ಯಾಡಗೊಟ್ಟ ನಿವಾಸಿಗಳ ಆಕ್ರೋಶ
ಕೂಡಿಗೆ, ನ. 28: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಪರಿಶಿಷ್ಟ ಜಾತಿ ನಿವಾಸಿಗಳ ಕಾಲೋನಿಯಲ್ಲಿ 25ಕ್ಕೂ ಹೆಚ್ಚು ಕುಟುಂಬಗಳು ಇದ್ದು, ಕಳೆದ 5 ವರ್ಷಗಳಿಂದಲೂ ಕಾಲೋನಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ.
ಪ್ರಕೃತಿ ವಿಕೋಪದ ಸಂದರ್ಭ 5 ಮನೆಗಳ ಗೋಡೆಗಳು ಬಿದ್ದು ಹಾನಿಯಾಗಿದ್ದರೂ ಗ್ರಾಮ ಪಂಚಾಯಿತಿಯಿಂದ ನೋಂದಣಿ ಮಾಡಿ ತೆರಳಿದ್ದಾರೆ ವಿನಃ ಯಾವದೇ ಪರಿಹಾರವಾಗಲೀ, ಪರ್ಯಾಯ ವ್ಯವಸ್ಥೆಯನ್ನಾಗಿ ಮಾಡಿಲ್ಲ ಎಂದು ಬ್ಯಾಡಗೊಟ್ಟ ಗ್ರಾಮದ ಕಾಲೋನಿಯ ನಿವಾಸಿಗಳು ಆರೋಪಿಸಿದ್ದಾರೆ.
ಕಾಲೋನಿಯಲ್ಲಿರುವ ಕುಟುಂಬದವರು ಮೂರು ವರ್ಷಗಳಿಂದಲೂ ಚರಂಡಿ ಮತ್ತು ಇನ್ನಿತರ ಮೂಲಭೂತ ಸೌಲಭ್ಯಗಳ ಬಗ್ಗೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವದೇ ಸ್ಪಂದನ ದೊರೆತಿಲ್ಲ. 2017-18ನೇ ಸಾಲಿನಲ್ಲಿ ಬ್ಯಾಡಗೊಟ್ಟ ಕಾಲೋನಿಯ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಮಂಜೂರಾದ ಹಣವನ್ನು ಕೂಡುಮಂಗಳೂರು ಮತ್ತು ಮುಳ್ಳುಸೋಗೆ ಗ್ರಾಮ ಪಂಚಾಯಿತಿಗಳಿಗೆ ವಿನಿಯೋಗಿಸಿದ್ದಾರೆ. ಅತಿ ಹೆಚ್ಚು ಕಡುಬಡವರು ಹಾಗೂ ವಸತಿ ರಹಿತರಿರುವ ಈ ಸ್ಥಳದಲ್ಲಿರುವವರಿಗೆ ಮೂಲಭೂತ ಸೌಲಭ್ಯ ಒದಗಿಸಲು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂಬ ಆಕ್ಷೇಪ ಕೇಳಿ ಬಂದಿದೆ.
ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಮನೆಗಳಿಗೆ ಅತಿ ಶೀಘ್ರದಲ್ಲಿ ಮನೆ ಒದಗಿಸುವ ಭರವಸೆ ನೀಡಿದ್ದ ಜಿಲ್ಲಾಡಳಿತ ಇದುವರೆಗೂ ಇದರ ಬಗ್ಗೆ ಗಮನಹರಿಸಿಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ತೆರಳಿದ್ದಾರೆ ವಿನಃ ಬಡ ಕುಟುಂಬಗಳಿಗೆ ಸೌಲಭ್ಯ ಒದಗಿಸಿಲ್ಲ. ಅಲ್ಲದೆ, ಈ ಕಾಲೋನಿಗೆ ಶುಚಿತ್ವ ಮತ್ತು ಗ್ರಾಮ ಪಂಚಾಯಿತಿಯಿಂದ ಒದಗಿಸಬಹುದಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವದರಲ್ಲಿ ತಾರತಮ್ಯವೆಸಗಿದ್ದಾರೆ ಎಂದು ಇಲ್ಲಿನ ನಿವಾಸಿಗಳಾದ ಗಣೇಶ್, ಗಿರೀಶ್, ಹೊನ್ನಮ್ಮ, ಜವರಮ್ಮ, ಕರಿಯಣ್ಣ, ಕಾಂತರಾ ಸೇರಿದಂತೆ 25ಕ್ಕೂ ಹೆಚ್ಚು ಕುಟುಂಬಸ್ಥರು ಆರೋಪಿಸಿದ್ದಾರೆ. ಎರಡು ವರ್ಷಗಳಲ್ಲಿ ಮೂವರು ಜಿಲ್ಲಾಧಿಕಾರಿಗಳು ಈ ಕಾಲೋನಿಗೆ ಭೇಟಿ ನೀಡಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಾಗಿ ಹಾಗೂ ಕಾಲೋನಿಯನ್ನು ಅಭಿವೃದ್ಧಿ ಪಡಿಸುವದಾಗಿ ತಿಳಿಸಿ ತೆರಳಿದ್ದಾರೆ. ಆದರೆ ಇದುವರೆಗೂ ಯಾರೊಬ್ಬ ಅಧಿಕಾರಿಗಳೂ, ಜನಪ್ರತಿನಿಧಿಗಳೂ ಇತ್ತ ಗಮನಹರಿಸಿಲ್ಲ.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಿಗೆ ಈ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಿದರೂ ಯಾವದೇ ಸ್ಪಂದನ ದೊರಕದೆ ಇರುವದರಿಂದ ಕೊಡಗು ಜಿಲ್ಲಾ ದಲಿತ ಹಿತ ರಕ್ಷಣಾ ಸಮಿತಿ ಮತ್ತು ಗ್ರಾಮಸ್ಥರೊಡಗೂಡಿ ಜಿಲ್ಲಾ ಪಂಚಾಯಿತಿಯ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಸಮಿತಿಯ ಅಧ್ಯಕ್ಷ ಅಣ್ಣಯ್ಯ, ಉಪಾಧ್ಯಕ್ಷ ಗಣೇಶ್ ಹಾಗೂ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಎಚ್ಚರಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ.