ಒಡೆಯನಪುರ, ನ. 28: ಕೊಡಗು-ಹಾಸನ ಗಡಿಭಾಗದಲ್ಲಿರುವ ಹೊಸೂರು ಗ್ರಾಮದ 400 ವರ್ಷಗಳಷ್ಟು ಇತಿಹಾಸ ಹೊಂದಿರುವ ಶ್ರೀ ಬೆಟ್ಟದ ಬಸವೇಶ್ವರಸ್ವಾಮೀಯವರ ಕೌಟೆಕಾಯಿ ಜಾತ್ರಾ ಮಹೋತ್ಸವದಲ್ಲಿ ದೇವಾಸ್ಥಾನ ಸಮಿತಿ, ಹೊಸೂರು ಬಸವೇಶ್ವರ ಜೆ.ಸಿ.ಐ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸಾಧಕರ ಸನ್ಮಾನ ಸಮಾರಂಭ ಮತ್ತು ವಿದ್ಯಾರ್ಥಿಗಳಿಗಾಗಿ ಆಯೋಜನೆ ಮಾಡಿದ್ದ ಅಂತರ್ ಜಿಲ್ಲಾ ಮಟ್ಟದ ಸಮೂಹ ನೃತ್ಯ ಮತ್ತು ರಸಮಂಜರಿ ಸ್ಪರ್ಧೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದ ಸಂದರ್ಭದಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.

ಪತ್ರಿಕಾ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಆಯೋಜಕರು ಸೋಮವಾರಪೇಟೆಯ ಹಿರಿಯ ಪತ್ರಕರ್ತ ಹಿರಿಕರ ರವಿ ಅವರನ್ನು ಶಾಲು ಹೊದಿಸಿ ಫಲ-ತಾಂಬೂಲ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು. ಸಮಾಜ ಸೇವೆಯ ಸಾಧಕರಾದ ಎ.ಆರ್. ಮುತ್ತಣ್ಣ ಹಾಗೂ ಹೊಸೂರು ಬೆಟ್ಟದ ಬಸವೇಶ್ವರ ದೇವಾಲಯ ಪ್ರವೇಶದ್ವಾರಕ್ಕೆ ಹೆಬ್ಬಾಗಿಲು ನಿರ್ಮಿಸಿಕೊಟ್ಟ ದಾನಿ ಮಂಜೂರು ಎಸ್. ಹೂವಣ್ಣ ಅವರುಗಳನ್ನು ಸನ್ಮಾನಿಸಿದರು.

ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ವಿದ್ಯಾರ್ಥಿಗಳ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಕೊಡಗು ಮತ್ತು ಹಾಸನ ಜಿಲ್ಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ದೇವಸ್ಥಾನ ಸಮಿತಿ ಮತ್ತು ಹೊಸೂರು ಬಸವೇಶ್ವರ ಜೆ.ಸಿ.ಐ. ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.