ಮಡಿಕೇರಿ, ನ. 27: ಕೊಡಗಿನ ಪ್ರ್ರಕೃತಿ.., ಪ್ರಕೃತಿ ವಿಕೋಪದಿಂದ ಕೊಡಗಿನ ಜನತೆಗೆ ಉಂಟಾದ ನೋವು.., ಅಮ್ಮ, ಶಾಲೆ-ಗುರುಗಳ ಮಹತ್ವ, ಪ್ಲಾಸ್ಟಿಕ್‍ನಿಂದಾಗುವ ದುಷ್ಪರಿಣಾಮ.., ಒಂಟಿ ಹೆಣ್ಣಿನ ಗೋಳಿನ ಪಯಣದ ಬಗ್ಗೆ ಕವಿಗಳು ಬೆಳಕು ಚೆಲ್ಲಿದರು.

ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷÀತ್ತು ಸಹಯೋಗದೊಂದಿಗೆ ಸಂಪಾಜೆ ಹೋಬಳಿ ಕ.ಸಾ.ಪ ಘಟಕ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಲಾಗಿದ್ದ ಕವಿಗೋಷ್ಠಿ, ಹಾಸ್ಯಗೋಷ್ಠಿ, ಪ್ರಬಂಧ ಸ್ಪರ್ಧೆ ಮತ್ತು ನಾ. ಡಿಸೋಜ ಮಕ್ಕಳ ಸಾಹಿತ್ಯ ಪುರಸ್ಕಾರ ದತ್ತಿ ಕಾರ್ಯಕ್ರಮ ಚೆಂಬು ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿತು. ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಕವಿಗಳು ಉತ್ತಮ ವಿಚಾರ-ಚಿಂತನೆಗಳನ್ನೊಳಗೊಂಡ ಕವನಗಳ ಮೂಲಕ ತಮ್ಮ ಭಾವನೆಗಳನ್ನು ಹೊರಗೆಡಹಿದರು.

ಕಾರ್ಯಕ್ರಮವನ್ನು ಕ.ಸಾ.ಪ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ಉದ್ದೇಶದೊಂದಿಗೆ ಶಾಲೆಗಳಲ್ಲಿ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಾಹಿತ್ಯ ಪರ ಚಟುವಟಿಕೆಗಳಲ್ಲಿ ಭಾಗವಹಿಸುವವರು ಕನ್ನಡ ಹಾಗೂ ಸಾಹಿತ್ಯದ ಮೇಲಿನ ಅಭಿಮಾನಿಗಳಾಗಿರುತ್ತಾರೆ. ಯಾರನ್ನೋ ಓಲೈಸಿಕೊಳ್ಳುವ ಹಿಂಬಾಲಕರಾಗಿರುವದಿಲ್ಲ. ಸಾಹಿತ್ಯಪರ ಕಾರ್ಯಕ್ರಮಗಳಿಗೆ ಕೈಜೋಡಿಸಿ ಸಹಕರಿಸುವಂತೆ ಕೋರಿದರು.

ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಮಾತ್ರ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಪತ್ರಿಕೆ ಹಾಗೂ ಸಾಹಿತ್ಯವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವದರೊಂದಿಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಓದು-ಬರೆಯುವ ಹವ್ಯಾಸವನ್ನು ಇಲ್ಲಿಗೇ ನಿಲ್ಲಿಸದೆ ವಿವಿಧೆಡೆ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಹೊರ ಹಾಕಬೇಕೆಂದು ಹೇಳಿದರು.

ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಕವಯತ್ರಿ ಹೊಸೂರು ಸಂಗೀತ ರವಿರಾಜ್ ಮಾತನಾಡಿ ಪದಗಳನ್ನು ಚೌಕಟ್ಟಿನಲ್ಲಿ ಹಿಡಿದಿಟ್ಟುಕೊಳ್ಳುವದೇ ಕವಿತೆ. ಅದು ಒಂದು ವಿಸ್ಮಯ. ಕವಿತೆಯನ್ನು ನಾವು ಅರಸುತ್ತಾ ಹೋಗಬೇಕೇ ಹೊರತು ಅದಾಗಿ ಬರುವದಿಲ್ಲ. ಪದಗಳಲ್ಲಿ ಹಿಡಿದಿಡುವ ಕವಿತೆಗೆ ಅಗಾಧ ಶಕ್ತಿ ಇರುತ್ತದೆ. ಪುಸ್ತಕ ಸಂಸ್ಕøತಿ, ಬರವಣಿಗೆಯ ಹವ್ಯಾಸಗಳನ್ನು ನಾವುಗಳು ಬೆಳೆಸಿಕೊಂಡರೆ ಮಕ್ಕಳು ಕೂಡ ಆಸಕ್ತಿ ತಾಳುತ್ತಾರೆ. ನಾವುಗಳು ಟಿ.ವಿ., ಮೊಬೈಲ್‍ನಲ್ಲಿದ್ದರೆ ಮಕ್ಕಳು ಕೂಡ ಅದನ್ನೇ ನೆಚ್ಚಿಕೊಳ್ಳುತ್ತಾರೆ ಎಂದರು.

ಹಾಸ್ಯಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಕೆ.ಕೆ. ವೆಂಕಪ್ಪ ಅವರು ಹಾಸ್ಯ ಜೀವನದ ಒಂದು ಭಾಗವಾಗಿದೆ. ಹಾಸ್ಯವಿಲ್ಲದ, ನಗುವಿಲ್ಲದವನ ಬಾಳು ಊಹಿಸಲಾಗದೆಂದು ಹಾಸ್ಯದ ಮಹತ್ವವನ್ನು ಹಾಸ್ಯಮಯವಾಗಿ ಹೇಳಿದರು. ಕ.ಸಾ.ಪ ಮಡಿಕೇರಿ ತಾಲೂಕು ಕಾರ್ಯದರ್ಶಿ ಡಾ. ಕೂಡಕಂಡಿ ದಯಾನಂದ ದತ್ತಿ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಪಾಜೆ ಹೋಬಳಿ ಘಟಕದ ಅಧ್ಯಕ್ಷ ಎನ್.ಸಿ. ಅನಂತ್ ಮಾತನಾಡಿ ಘಟಕದ ವತಿಯಿಂದ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ಸರ್ವರೂ ಸಹಕಾರ ನೀಡುವಂತೆ ಕೋರಿದರು. ಅತಿಥಿಗಳಾಗಿದ್ದ ಚೆಂಬು ಗ್ರಾ.ಪಂ ಅಧ್ಯಕ್ಷ ಯು.ಕೆ. ದಿನೇಶ್‍ಕುಮಾರ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಸುಬ್ರಮಣ್ಯ ಉಪಾಧ್ಯಾಯ, ಪ್ರೌಢ ಶಾಲೆ ಶಿಕ್ಷಕಿ ದೇಜಮ್ಮ ಕಟ್ಟೆಮನೆ, ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಕುಮಾರ್ ಚೆದ್ಕಾರ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಚಿದಾನಂದ ಮಾಸ್ಟರ್ ತಮ್ಮ ಹಾಸ್ಯ ಚಟಾಕಿಗಳ ಮೂಲಕ ನೆರೆದವರನ್ನು ರಂಜಿಸಿದರು.

ಕವಿಗಳಾದ ಉದಯಕುಮಾರಿ ಚೆಂಬು, ಚೆಂಬು ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಬಿ.ಸಿ. ಗಾಯನ, ಜಸ್ಮಿತ ಬಿ.ಸಿ, ದೀಪ್ತಿ ಎಂ.ಎ., ಜೀವಿತಾ ಬಿ.ಎಸ್., ಪಿ.ಎಂ. ರಮ್ಯ, ಸಂಪಾಜೆ ಪ್ರೌಢ ಶಾಲೆಯ ಬಿ. ಪ್ರಜ್ವಲ್, ಜಸ್ಮಿತಾ ಕೆ.ಆರ್., ಪೆರಾಜೆ ಜ್ಯೋತಿ ಪ್ರೌಢ ಶಾಲೆಯ ಕೆ.ಎನ್. ಕೀರ್ತನ್, ಬಿ.ಎಸ್. ಶಿವಗಣೇಶ್, ಕವನವಾಚನ ಮಾಡಿದರು.

ಇದೇ ಸಂದರ್ಭ ರಾಜ್ಯೋತ್ಸವ ಪ್ರಯುಕ್ತ ‘ಸ್ವಚ್ಛ ಭಾರತ ಗುರಿ ಮಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ’ ವಿಷಯದಡಿ ಹೋಬಳಿಯ ವಿದ್ಯಾ ಶಾಲೆಗಳಲ್ಲಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂಪಾಜೆ ಪ.ಪೂ ಕಾಲೇಜಿನ ಗೀತಾ ಹೆಚ್.ಸಿ., ಡಿ.ವಿ. ವೈಶಾಲಿ, ದರ್ಶನ್, ಪ್ರೌಢ ಶಾಲಾ ವಿಭಾಗದಲ್ಲಿ ಬಿ. ಪ್ರಜ್ವಲ್, ಕೆ.ಜಿ. ಧನ್ಯಶ್ರೀ, ಬಿ.ವಿ. ಹರ್ಷಿತ್, ಕೊಯನಾಡು ಪ್ರೌಢ ಶಾಲೆಯ ಬಿ.ಎಸ್. ಧನಿತ್, ಕೆ.ಬಿ. ಪ್ರಥ್ವಿ, ಕೆ.ಡಿ. ದೀಪಕ್, ಚೆಂಬು ಪ್ರೌಢ ಶಾಲೆಯ ಬಿ.ಆರ್. ಶ್ರಾವ್ಯ, ಜಿ.ಎನ್. ಶ್ರೇಯಸ್, ಪಿ.ಟಿ. ಚೈತ್ರಶ್ರೀ ಹಾಗೂ ಬಿ.ಸಿ ವರ್ಷ, ಪೆರಾಜೆ ಜ್ಯೋತಿ ಪ್ರೌಢ ಶಾಲೆಯ ವಿ.ಎಸ್., ವಿಖ್ಯಾತ್, ಕೆ.ಎನ್. ಕೀರ್ತನ್ ಅವರುಗಳು ಬಹುಮಾನ ಪಡೆದುಕೊಂಡರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರೆ, ಯುವ ಸಾಹಿತಿ ಲೋಕೇಶ್ ಊರುಬೈಲು ಕಾರ್ಯಕ್ರಮ ನಿರೂಪಿಸಿದರು. ಕ.ಸಾ.ಪ ಹೋಬಳಿ ಘಟಕದ ಕಾರ್ಯದರ್ಶಿ ಯಶೋಧರ ವಂದಿಸಿದರು.