ಕೊಡ್ಲಿಪೇಟೆ, ನ. 28: ಕೊಡಗಿನ ಗಡಿಪ್ರದೇಶದ ಕೊಡ್ಲಿಪೇಟೆ ಹೋಬಳಿ ಕಂದಾಯಾಧಿಕಾರಿ ಹುದ್ದೆ ಕಳೆದ 10 ದಿನಗಳಿಂದ ಖಾಲಿಯಿದ್ದು ಕಚೇರಿ ಕೆಲಸಗಳಾಗದೆ ನಾಗರಿಕರು ಪರಿತಪಿಸುವಂತಾಗಿದೆ. ಹೋಬಳಿ ಕಂದಾಯಾಧಿಕಾರಿ ಆಗಿದ್ದ ಮನುಕುಮಾರ್ ಅನಾರೋಗ್ಯ ಕಾರಣ ರಜೆಯಲ್ಲಿರುವದಾಗಿ ಹೇಳಲಾಗಿದೆ. ಪರ್ಯಾಯವಾಗಿ ಹೋಬಳಿಗೆ ಯಾರೊಬ್ಬರನ್ನೂ ನೇಮಿಸದಿರುವದು ಜಿಲ್ಲಾಡಳಿತದ ನಿರ್ಲಕ್ಷಕ್ಕೆ ಸಾಕ್ಷಿ ಎಂದು ಸ್ಥಳೀಯ ನಾಗರಿಕರು ‘ಶಕ್ತಿ’ಯೊಂದಿಗೆ ದೂರಿಕೊಂಡಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ಗೋವಿಂದರಾಜು ಅವರು ತಾತ್ಕಾಲಿಕವಾಗಿ ಯಾರನ್ನೂ ನಿಯೋಜಿಸದಿರುವದು ನಾಗರಿಕರ ಕಚೇರಿ ಕೆಲಸಗಳಿಗೆ ತೊಂದರೆ ಆಗಿದೆ. ಪ್ರಸ್ತುತ ಕೊಡ್ಲಿಪೇಟೆ ಹೋಬಳಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಉಪ ತಹಶೀಲ್ದಾರ್ ಗೆ ತಾತ್ಕಾಲಿಕ ಹೊಣೆ ನೀಡಿದರೂ ಸಮಸ್ಯೆ ಬಗೆಹರಿಯಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಗಮನ ಹರಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ. ರೆವಿನ್ಯೂ ಇನ್ಸ್‍ಪೆಕ್ಟರ್ ಅಥವಾ ಪರ್ಯಾಯ ವ್ಯವಸ್ಥೆ ತುರ್ತು ನಿಯೋಜನೆ ಆಗದಿದ್ದಲ್ಲಿ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ಸ್ಥಳೀಯ ನಾಗರಿಕರು ಎಚ್ಚರಿಸಿದ್ದಾರೆ.