ಕೂಡಿಗೆ, ನ. 28: ಕೂಡು ಮಂಗಳೂರು ಗ್ರಾಮ ಪಂಚಾಯ್ತಿಗೆ ಹೊಂದಿಕೊಂಡಂತಿ ರುವ ಕೂಡಿಗೆ ಸುಬ್ರಹ್ಮಣ್ಯ ದೇವಾಲಯದ ಮುಂಭಾಗದ ಮೂಲಕ ಹಾರಂಗಿ ಸೇರುವ 5 ಕಿ.ಮೀ ರಸ್ತೆಯು ತೀರಾ ಹಾಳಾಗಿದೆ. ಈ ರಸ್ತೆಯು ಚಿಕ್ಕತ್ತೂರು, ದೊಡ್ಡತ್ತೂರು, ಬಸವನತ್ತೂರು, ಬೆಂಡೆಬೆಟ್ಟದ ಸಂಪರ್ಕ ರಸ್ತೆಯೂ ಕೂಡ ಆಗಿದೆ. ಕಳೆದ ಎರಡು ವರ್ಷಗಳಿಂದಲೂ ಈ ರಸ್ತೆಯು ಹಾಳಾಗಿದ್ದರೂ ಸಂಬಂಧಪಟ್ಟವರು ಇದರತ್ತ ಗಮನಹರಿಸದೆ ನಿರ್ಲಕ್ಷಿಸಿದ್ದಾರೆ. ಇದರಿಂದಾಗಿ ದ್ವಿಚಕ್ರ ವಾಹನಗಳು ಚಲಿಸಲು ಆಗದೆ, ಗುಂಡಿ ಬಿದ್ದು, ಸವಾರರು ಅವಘಡಕ್ಕೆ ಈಡಾಗಿರುವ ಘಟನೆಯೂ ನಡೆದಿದೆ.
ಈ ರಸ್ತೆಯನ್ನು ದುರಸ್ತಿಗೊಳಿಸು ವದಾಗಿ ಕಾಮಗಾರಿಗೆ ಭೂಮಿಪೂಜೆ ನಡೆಸಿದರೂ ಇದುವರೆಗೂ ಕಾಮಗಾರಿ ನಡೆದಿಲ್ಲ. ಕಾಮಗಾರಿ ಕ್ರಿಯಾಯೋಜನೆಗೊಳ್ಳದಿದ್ದರೂ, ಜನರ ಒತ್ತಾಯಕ್ಕೆ ಕಾಮಗಾರಿ ನಡೆಸುವದಾಗಿ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಯನ್ನು ನಡೆಸದೆ ಸುಮ್ಮನಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಿ ರಸ್ತೆಯ ದುರಸ್ತಿ ಕಾರ್ಯಕ್ಕೆ ಮುಂದಾಗಿ ವಾಹನಗಳ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.