ಚೆಟ್ಟಳ್ಳಿ, ನ. 28: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಕಾರ್ಮಿಕರು, ರೋಗಿಗಳು, ವಿದ್ಯಾರ್ಥಿಗಳು, ವಯೋ ವೃದ್ಧರು ಸಂಚಾರಕ್ಕೆ ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಡಗು ಜಿಲ್ಲೆಯಲ್ಲಿ ಸಿದ್ದಾಪುರ ಪಂಚಾಯಿತಿ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯಿತಿಯಾಗಿದೆ.

ಸಿದ್ದಾಪುರ ಪಂಚಾಯಿತಿಯ ಗುಹ್ಯ, ಕರಡಿಗೋಡು, ಸಿದ್ದಾಪುರದ ಬಹುತೇಕ ಎಲ್ಲಾ ರಸ್ತೆಗಳು ವಾಹನ ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿದೆ.

ಈ ಭಾಗದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಲ್ಲಿ ನೂರಾರು ಮನೆಗಳು ನೆಲಸಮವಾಗಿದ್ದು, ಈ ಪ್ರದೇಶಗಳಿಗೆ ಕೇಂದ್ರ, ರಾಜ್ಯದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದೇ ರಸ್ತೆಯಲ್ಲಿ ತಮ್ಮ ಐಷಾರಾಮಿ ಕಾರುಗಳಲ್ಲಿ ಸಂಚಾರಿಸಿದ್ದು, ಈ ರಸ್ತೆಯ ಅವ್ಯವಸ್ಥೆ ಗಳನ್ನು ಕಣ್ತುಂಬಿ ಕೊಂಡಿದ್ದು, ಬಿಟ್ಟರೆ ರಸ್ತೆಯ ಅಭಿವೃದ್ಧಿ ಬಗ್ಗೆ ಗಮನ ಹರಿಸಿಲ್ಲ ಎಂದು ಕರಡಿಗೋಡು ವ್ಯಾಪ್ತಿಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಕ್ಕೆ ಮುಖ್ಯಮಂತ್ರಿ ಭೇಟಿ ನೀಡುತ್ತಿದ್ದಾರೆ ಎಂದು ತಿಳಿದ ತಕ್ಷಣವೇ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ತರಾತುರಿಯಲ್ಲಿ ರಸ್ತೆ ಕಲ್ಲುಗಳನ್ನು ಹಾಕಿದ್ದರು.

ಅವೈಜ್ಞಾನಿಕ ಇಂಟರ್ ಲಾಕ್ ಅಳವಡಿಕೆ

ಪಾದಚಾರಿ ರಸ್ತೆಗೆ ಅಳವಡಿಸುವ ಇಂಟರ್ಲಾಕ್ ಅನ್ನು ಸುಮಾರು 16 ಲಕ್ಷ ರೂಪಾಯಿ ವೆಚ್ಚದಲ್ಲಿ ಮುಖ್ಯ ರಸ್ತೆಗೆ ಅಳವಡಿಸಿದ್ದು ಸಂಪೂರ್ಣ ಒಡೆದು ಹೋಗಿ ಗುಂಡಿಗಳು ನಿರ್ಮಾಣವಾಗಿದೆ. ಭಾರೀ ವಾಹನ ಗಳು ಸಂಚರಿಸುವ ಮುಖ್ಯರಸ್ತೆಗೆ ಇಂತಹ ಅವೈಜ್ಞಾನಿಕ ಕಾಮಗಾರಿ ಅವಶ್ಯಕತೆ ಇರಲಿಲ್ಲ ಎಂದು ಈ ವ್ಯಾಪ್ತಿಯ ಜನರು ಹೇಳುತ್ತಾರೆ.

ದಿನ ಬೆಳಗಾಗುವದರೊಳಗೆ ಕಾಂಕ್ರೀಟ್ ರಸ್ತೆ ನಿರ್ಮಾಣ

ಸಿದ್ದಾಪುರ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯು ಕರಡಿಗೋಡುವಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಯಡಿಯಲ್ಲಿ 100 ಮೀಟರ್ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಿದ್ದು, ದಿನ ಬೆಳಗಾಗುವಾಗ ಕೇವಲ ಜಲ್ಲಿಕಲ್ಲು ಗೋಚರಿಸಿದ ಪರಿಣಾಮ ಗ್ರಾಮಸ್ಥರು ಈ ರೀತಿ ಕಳಪೆ ಕಾಮಗಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು, ಅಲ್ಲದೆ ಕಾಮಗಾರಿಯ ಹಣವನ್ನು ಬಿಡುಗಡೆ ಮಾಡದಂತೆ ಗ್ರಾಮ ಪಂಚಾಯಿತಿಗೆ ಲಿಖಿತ ರೂಪದಲ್ಲಿ ಸಹಿ ಸಂಗ್ರಹಿಸಿ ಮನವಿಮಾಡಿದ್ದಾರೆ.

ಕರಡಿಗೋಡು ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿದ್ದು, ರಸ್ತೆ ಅವ್ಯವಸ್ಥೆಯಿಂದ ಸಂಚರಿಸಲು ಕಷ್ಟವಾಗಿದೆ, ಈ ರಸ್ತೆ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು, ಕಾಳಜಿ ವಹಿಸಬೇಕು ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲೇ ಕೈಗೊಳ್ಳಬೇಕು ಎಂದು ಆಟೋ ಚಾಲಕ ದಿನೇಶ್ ಒತ್ತಾಯಿಸಿದ್ದಾರೆ.

-ಕೆ.ಎಂ ಇಸ್ಮಾಯಿಲ್ ಕಂಡಕರೆ