ಕೂಡಿಗೆ: ಕೊಡಗು ಸೈನಿಕ ಶಾಲೆ ಕೂಡಿಗೆ ಇವರ ವತಿಯಿಂದ ಸಂವಿಧಾನ ದಿನ ಆಚರಣಾ ಕಾರ್ಯಕ್ರಮ ನಡೆಯಿತು. ಸೈನಿಕ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳು ಶಾಲೆಯ ಆವರಣದಿಂದ ಕೂಡಿಗೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನಂದೀಶ್ ನೆರವೇರಿಸಿ ಮಾತನಾಡಿ, ಭಾರತ ವಾಸಿಗಳಾದ ನಾವು ಭಾರತ ಸಾರ್ವಭೌಮ ಸಮಾಜವಾದಿ ಜಾತ್ಯತೀತ ಲೋಕತಾಂತ್ರಿಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿತವಾದ ಸಂವಿಧಾನವಾಗಿದೆ. ಅದನ್ನು ಗೌರವಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭ ಶಾಲೆಯ ಸಮಾಜಶಾಸ್ತ್ರ ಅಧ್ಯಾಪಕರ ಅಶೋಕ ಕೆಂಗಾರೆ, ದಕ್ಷಿಣಮೂರ್ತಿ ರಮನವಾಯಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಗೋಣಿಕೊಪ್ಪಲು: ಇಲ್ಲಿನ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಸಂವಿಧಾನ ದಿನ ಆಚರಿಸಲಾಯಿತು. ಈ ಸಂದರ್ಭ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ನಮ್ಮ ದೇಹದ ಚಲನೆ ಸುಗಮವಾಗಿ ಸಾಗಬೇಕಾದರೆ ಆತ್ಮ ಎಷ್ಟು ಮುಖ್ಯವೋ, ನಮ್ಮ ದೇಶದ ಆಡಳಿತ ವ್ಯವಸ್ಥೆ ಸುಗಮವಾಗಿ ನಡೆಯಬೇಕಾದರೆ ಸಂವಿಧಾನವೆಂಬ ಆತ್ಮ ಕೂಡ ಅಷ್ಟೇ ಮುಖ್ಯ. ಪ್ರಪಂಚದಲ್ಲೇ ಅತ್ಯಂತ ಬೃಹತ್ ಹಾಗೂ ವಿಶಿಷ್ಟವಾದ ಸಂವಿಧಾನವನ್ನು ಡಾ. ಬಿ.ಆರ್. ಅಂಬೇಡ್ಕರ್ ನಮಗೆ ನೀಡಿದ್ದಾರೆ. ಭಾರತೀಯ ಪ್ರಜೆಗಳಾದ ನಾವೆಲ್ಲರೂ ಸಂವಿಧಾನಕ್ಕೆ ವಿರುದ್ಧವಾಗಿ ಕೆಲಸ ಮಾಡದೇ, ಸಂವಿಧಾನಕ್ಕೆ ಗೌರವ ನೀಡುವ ಮೂಲಕ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದರು. ಈ ಸಂದರ್ಭ ಕನ್ನಡ ಉಪನ್ಯಾಸಕಿ ಎಂ.ಬಿ. ಪದ್ಮ, ಹಾಗೂ ಅರ್ಥಶಾಸ್ತ್ರ ಉಪನ್ಯಾಸಕಿ ದಿವ್ಯ ಉಪಸ್ಥಿತರಿದ್ದರು.