*ಗೋಣಿಕೊಪ್ಪ್ಪಲು, ನ. 27: ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸಲು ಒಗ್ಗಟ್ಟಿನಿಂದ ಮಾತ್ರ ಸಾಧ್ಯ ಎಂದು ಬುಡಕಟ್ಟು ಕಾರ್ಮಿಕರ ಸಂಘದ ಅಧ್ಯಕ್ಷ ವೈ.ಬಿ. ಗಪ್ಪು ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ನಡೆದ ಬುಡಕಟ್ಟು ಕಾರ್ಮಿಕ ಸಂಘಟನಾ ಸಮಾವೇಶ ವನ್ನು ಉದ್ದೇಶಿಸಿ ಅವರು ಮಾತನಾಡಿದರು. ಮತಾಂತರದಿಂದ ಇಂದು ನಮ್ಮ ಜನಾಂಗ ಅಳಿದು ಹೋಗುತ್ತಿದೆ. ಅಮೂಲ್ಯವಾದ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ನೀಡುವ ಹೊಣೆ ನಮ್ಮ ಮೇಲಿದೆ ಎಂದು ಹೇಳಿದರು.
ನೂರಾರು ಬುಡಕಟ್ಟು ಜನಾಂಗ ಬಾಂದವರು ಇಲ್ಲಿನ ಕಾವೇರಿ ಕಾಲೇಜು ಮುಂಭಾಗದಿಂದ ಪೆÇನ್ನಂ ಪೇಟೆ ರಸ್ತೆಯ ತಿರುವಿನವರೆಗೆ ಮೆರವಣಿಗೆ ನಡೆಸಿ ತಮ್ಮ ಸಂಸ್ಕೃತಿಯ ನೃತ್ಯಗಳ ಮೂಲಕ ಗಮನ ಸೆಳೆದರು. ನಂತರ ಮೂಲಭೂತ ಸೌಕರ್ಯ ಗಳನ್ನು ಒದಗಿಸಿಕೊಡಲು ಸಂಬಂಧಿಸಿ ದವರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಜಿಲ್ಲಾ ಬುಡಕಟ್ಟು ಕಾರ್ಮಿಕ ಸಂಘದ ಗೌರವಾಧ್ಯಕ್ಷ ಗಣೇಶ್, ರಾಜ್ಯ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷೆ ಜಾನಕ್ಕಮ್ಮ, ದೇವರಕಾಡು ಬುಡಕಟ್ಟು ಮಹಿಳಾ ಸಂಘದ ಅಧ್ಯಕ್ಷೆ ಪ್ರೇಮಾ, ಜಿಲ್ಲಾ ಬುಡಕಟ್ಟು ಕಾರ್ಮಿಕರ ಸಂಘದ ಉಪಾಧ್ಯಕ್ಷೆ ಸೀತೆ, ಕಾರ್ಯದರ್ಶಿ ಲಲಿತಾ ಸೇರಿದಂತೆ ನೂರಾರು ಬುಡಕಟ್ಟು ಜನಾಂಗದವರು ಹಾಜರಿದ್ದರು.