ಮಡಿಕೇರಿ, ನ. 28: ಜವಾಹರ ನವೋದಯ ವಿದ್ಯಾಲಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ರಾಷ್ಟ್ರೀಯ ಪುಸ್ತಕ ಸಪ್ತಾಹಗಳ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೋಕೇಶ್ ಸಾಗರ್ ಅವರು ಮಕ್ಕಳನ್ನುದ್ದೇಶಿಸಿ ಮಾತನಾಡಿ, ವಿವಿಧ ಸ್ಪರ್ಧೆಗಳಲ್ಲಿ ಬಹುಮಾನವಾಗಿ ದೊರೆತ ಪುಸ್ತಕಗಳನ್ನು ಕೇವಲ ಕಪಾಟಿನಲ್ಲಿಟ್ಟು ಸಿಂಗರಿಸಿ ಬಿಡಬೇಡಿ. ಅವುಗಳನ್ನು ಓದಿ ಎಂದು ಕಿವಿಮಾತು ಹೇಳಿದರು.

ಸ್ವರಚಿತ ಕವನ, ಆಶುಭಾಷಣ, ಸಮೂಹ ನೃತ್ಯ ಸೇರಿದಂತೆ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪಿ.ಎಂ. ಐಸಾಕ್ ಅವರು ಮಾತೃಭಾಷೆಯ ಕುರಿತು ಅಭಿಮಾನ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ಕನ್ನಡ ಅಧ್ಯಾಪಕರಾದ ಮಾರುತಿ ದಾಸಣ್ಣವರ ಸ್ವಾಗತಿಸಿದರೆ, ಗಣೇಶ್ ಹೆಗಡೆ ನಿರೂಪಿಸಿದರು, ಮಕ್ಕಳು ಸಾಂಸ್ಕøತಿಕ ಕಾರ್ಯಕ್ರಮಗಳಿಂದ ರಂಜಿಸಿದರು. ಉಪಪ್ರಾಂಶುಪಾಲ ದಿನೇಶನ್ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.