ಗೋಣಿಕೊಪ್ಪಲು, ನ.26 : ದ.ಕೊಡಗಿನ ವಿವಿಧ ಭಾಗದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಗಳು ಇದೀಗ ಹಿಂಡು ಹಿಂಡಾಗಿ ಕಾಣಿಸಿ ಕೊಳ್ಳುತ್ತಿದ್ದು ನಾಗರಿಕರಲ್ಲಿ ಭಯದ ವಾತಾವರಣ ಮನೆ ಮಾಡಿದೆ. ಮಂಗಳವಾರ ಮಧ್ಯಾಹ್ನ 11.30ರ ಸುಮಾರಿಗೆ ತಿತಿಮತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೋಕ್ಯ ಗ್ರಾಮದ ಎಡತೊರೆ ಬಳಿ 13ಕ್ಕೂ ಹೆಚ್ಚಿನ ಕಾಡಾನೆಯ ಹಿಂಡು ಒಂದು ಕಾಫಿ ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ದಾಟುವದನ್ನು ಕಂಡು ಈ ಭಾಗದ ಜನತೆ ಗಾಬರಿ ಗೊಂಡಿದ್ದಾರೆ.

ತಿತಿಮತಿ ಬಾಳೆಲೆ ಮುಖ್ಯ ರಸ್ತೆಯ ಎಡತೊರೆ ಗ್ರಾಮದಲ್ಲಿ ಈ ಕಾಡಾನೆ ಹಿಂಡು ಕಾಣಿಸಿಕೊಂಡಿದ್ದು ಕೆಲವು ದಿನಗಳಿಂದ ಇವುಗಳು ಕಾಫಿ ತೋಟದಲ್ಲಿ ತಂಗಿರುವ ಬಗ್ಗೆ ಮಾಹಿತಿ ದೊರಕಿದೆ. ಜನನಿಭಿಡ ಪ್ರದೇಶದಲ್ಲೇ ಈ ರೀತಿ ಕಾಡಾನೆ ಹಿಂಡು ಕಾಣಿಸಿಕೊಳ್ಳುತ್ತಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮೌನ ವಹಿಸಿದ್ದಾರೆ.ಇತ್ತೀಚೆಗೆ ಆನೆ ದಾಳಿಯಿಂದ ದ.ಕೊಡಗಿನ ವಿವಿಧ ಭಾಗದಲ್ಲಿ ಅನಾಹುತಗಳು ಸಂಭವಿಸಿದ್ದು ಪ್ರಾಣಹಾನಿ ಉಂಟಾಗಿದೆ. ರೈತ ಸಂಘ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳು ಕಾಡಾನೆ ಹಾವಳಿ ನಿಯಂತ್ರಣದ ಬಗ್ಗೆ ಧ್ವನಿ ಎತ್ತಿದ್ದಾರೆ.

(ಮೊದಲ ಪುಟದಿಂದ) ಕೆಲವು ಕಾಫಿ ತೋಟಗಳಲ್ಲಿ ಕಾಫಿ ಹಣ್ಣುಗಳು ಕುಯ್ಯುವ ಹಂತ ತಲಪಿದ್ದು ಕಾರ್ಮಿಕರು ಹೆಚ್ಚಾಗಿ ತೋಟದ ಕೆಲಸದಲ್ಲಿ ಮಗ್ನರಾಗಿದ್ದಾರೆ. ಕಾಫಿ ತೋಟದಲ್ಲೇ ಕಾಡಾನೆಗಳು ಬೀಡು ಬಿಟ್ಟಿರುವದರಿಂದ ಕಾರ್ಮಿಕರು ಜೀವ ಭಯದೊಂದಿಗೆ ಕೆಲಸ ನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಕಾಡಾನೆಯನ್ನು ಓಡಿಸುವ ಕುರಿತು ಅರಣ್ಯ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಂಡಿದ್ದರೂ ಕಾಡಾನೆ ಹಿಂಡು ಮಾತ್ರ ಹೆಚ್ಚಾಗುತ್ತಲೇ ಇರುವದು ಅಧಿಕಾರಿಗಳ ನಿದ್ದೆಗೆಡಿಸಿದೆ.

ಮುಂಜಾನೆ ಇದೇ ಭಾಗದಲ್ಲಿ ಹುಲಿರಾಯ ಪ್ರತ್ಯಕ್ಷವಾಗಿದ್ದು; ಸಾರ್ವಜನಿಕರು ಹುಲಿಯನ್ನು ಅನತಿ ದೂರದಿಂದ ನೋಡಿರುವ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಬಾಳೆಲೆ ಸಮೀಪದ ಕಾಫಿ ತೋಟ ಮಾಲೀಕರೊಬ್ಬರ ಹಸುವನ್ನು ಕೊಂದು ತಿಂದಿರುವ ಹುಲಿ ಎಂದು ಅಂದಾಜಿಸಿದ್ದಾರೆ. ಹುಲಿ, ಕಾಡಾನೆಯಿಂದ ಜನತೆ ಕಂಗಾಲಾಗಿದ್ದು ರಾತ್ರಿ ಸಮಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ವನ್ಯಜೀವಿಗಳು ಇದೀಗ ಹಗಲಿನ ವೇಳೆಯೇ ಕಾಣಿಸಿಕೊಂಡಿದ್ದರಿಂದ ರಸ್ತೆಯಲ್ಲಿ ಸಂಚರಿಸುವದು ಕಷ್ಟವಾಗಿದೆ. ಕಾಫಿ, ಭತ್ತದ ಗದ್ದೆಗಳನ್ನು ಈ ಕಾಡಾನೆ ಹಿಂಡು ಲೂಟಿ ಮಾಡಿದ್ದು ರೈತರು ಬೆಳೆದ ಬೆಳೆಗಳು ನಾಶವಾಗಿವೆ. ಇರುವ ಬೆಳೆಗಳನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಈ ಭಾಗದ ರೈತರದ್ದಾಗಿದೆ.