ಮಡಿಕೇರಿ, ನ. 26: ಮಡಿಕೇರಿ ಬಳಿಯ ಗಾಳಿಬೀಡು ಸರ್ಕಾರಿ ಪ್ರೌಢಶಾಲೆ, ಕಳೆದ ಆರು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡವಾರು ಫಲಿತಾಂಶ ಪಡೆಯುತ್ತಲೇ ಬಂದಿದೆ. ಈ ಬಾರಿಯೂ ಶಿಕ್ಷಕರ ಶ್ರಮದಿಂದ ಸಾಧನೆ ಗೋಚರಿಸಿದೆ. ಈ ಹಿನ್ನೆಲೆ ಎಸ್‍ಡಿಎಂಸಿ ವತಿಯಿಂದ ಶಿಕ್ಷಕರನ್ನು ಸನ್ಮಾನಿಸಿ, ಗೌರವಿಸಿತು. ಪ್ರಬಾರ ಮುಖ್ಯ ಶಿಕ್ಷಕಿ ಕಾವೇರಿ, ಶಿಕ್ಷಕರಾದ ಎನ್. ಸುಮ, ಕೆ.ಎನ್. ಶಿಲ್ಪಾ, ಹೆಚ್.ವಿ. ತೇಜ, ಎಂ. ರಮೇಶ್ ಹಾಗೂ ಹೆಚ್.ಕೆ. ರಶ್ಮಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಡಿವೈಎಸ್ಪಿ ಬಾರಿಕೆ ದಿನೇಶ್, ಮಕ್ಕಳ ಏಳಿಗೆಗಾಗಿ ಶ್ರಮಿಸಿದ ಶಿಕ್ಷಕರನ್ನು ಗುರುತಿಸುವ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಹೇಳಿದರು.
ಸಮಾಜಸೇವಕ ಹಾಗೂ ದಾನಿ ವಾಸುದೇವ್ ಮಾತನಾಡಿ, ಶಿಕ್ಷಕರು ಹೊಣೆಗಾರಿಕೆಯಿಂದ ಕೆಲಸ ನಿರ್ವಹಿಸುವದರಿಂದ ಪೋಷಕ ರಲ್ಲೂ ಬದಲಾವಣೆಯಾಗಿದೆ ಎಂದರು.
‘ಚಿತ್ತಾರ’ದ ವ್ಯವಸ್ಥಾಪಕ ನಿರ್ದೇಶಕಿ ಸವಿತಾರೈ ಮಾತನಾಡಿ, ಕಲಿತ ಶಾಲೆಗೆ ಏನನ್ನಾದರೂ ಕೊಡುಗೆಯಾಗಿ ನೀಡಬೇಕೆಂದರೆ ಉತ್ತಮ ಫಲಿತಾಂಶವನ್ನು ನೀಡಿ ಎಂದು ಕಿವಿಮಾತು ಹೇಳಿದರು.
ಡಿಎಸ್‍ಎಸ್ ಸಂಚಾಲಕ ದಿವಾಕರ್ ಮಾತನಾಡಿ, ಸಂಘಟನೆಯಿಂದ ನಿರಂತರ ಇಂತಹ ಕೆಲಸ ನಡೆಯುತ್ತಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯ ಶಿಕ್ಷಕಿ ಕಾವೇರಿ, ಇಂತಹ ಗೌರವ, ನಮ್ಮ ಜವಾಬ್ದಾರಿ ಹೆಚ್ಚಿಸಿದೆ ಎಂದರು.
ವೇದಿಕೆಯಲ್ಲಿ ಉದ್ಯಮಿಗಳಾದ ರವೀಂದ್ರರೈ, ಖಲೀಲ್, ಎಸ್‍ಡಿಎಂಸಿ ಅಧ್ಯಕ್ಷೆ ಅನಿತಾ ಹಾಗೂ ದೈಹಿಕ ಶಿಕ್ಷಕ ರಮೇಶ್ ಉಪಸ್ಥಿತರಿದ್ದರು.