ಸೋಮವಾರಪೇಟೆ, ನ. 25: ಕಳೆದ ವರ್ಷದ ಮಳೆಗಾಲದಲ್ಲಿ ಕೆರೆಗೆ ಬಿದ್ದು ಪ್ರಾಣ ಕಳೆದುಕೊಂಡ ಪರಿಶಿಷ್ಟ ಯುವಕನ ಕುಟುಂಬಕ್ಕೆ ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರಾಜ್ಯ ಪರಿಶಿಷ್ಟ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ನೇತೃತ್ವವನ್ನು ಸಮಿತಿಯ ಜಿಲ್ಲಾ ಸಂಚಾಲಕ ಎಂ.ಎಸ್.ವೀರೇಂದ್ರ ವಹಿಸಿ ಮಾತನಾಡಿ, ಕಳೆದ ಆಗಸ್ಟ್ ತಿಂಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದ ಸಂದರ್ಭ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದ್ರೆ ಗ್ರಾಮದ ಬಡ ಕುಟುಂಬದ ದೊಡ್ಡಯ್ಯ ಎಂಬವರು ದೊಡ್ಡಕೆರೆ ಏರಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಕಾಲು ಜಾರಿ ಬಿದ್ದು ಪ್ರಾಣ ಕಳೆದು ಕೊಂಡಿದ್ದರು. ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಜಿಲ್ಲಾಡಳಿತ ಇದುವರೆಗೆ ಪರಿಹಾರ ವಿತರಿಸಿಲ್ಲ ಎಂದು ದೂರಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಗೋವಿಂದರಾಜು ಮಾತನಾಡಿ, ಕೆರೆಗೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ಎಫ್‍ಐಆರ್ ಆಗಿದೆ. ಈ ಕಾರಣ ದಿಂದ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಲ್ಲಿ 20 ಸಾವಿರ ರೂ.ಗಳನ್ನು ನಾಳೆಯೇ ಮೃತರ ಪತ್ನಿಯ ಖಾತೆಗೆ ಜಮಾ ಮಾಡಲಾಗುವದು ಎಂದು ಭರವಸೆ ನೀಡಿದರು.

ತಹಶೀಲ್ದಾರ್‍ರ ಭರವಸೆಯ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಸಂಘಟನೆಯ ಪದಾಧಿಕಾರಿಗಳಾದ ಡಿ.ಎಸ್. ಕಾಂತರಾಜು, ಜಿ.ಎಸ್. ದಿನೇಶ್, ಮಂಜುನಾಥ್, ಹರೀಶ್, ಪ್ರೇಮಾ ವಸಂತ್, ಮಂಜುಳಾ, ಪ್ರಮೀಳಾ, ಅನಿತಾ, ಯತೀಶ್, ವಿಶ್ವಾಸ್, ಎಂ.ಎನ್. ಮಂಜುನಾಥ್, ತಮ್ಮಯ್ಯ, ಧರ್ಮಯ್ಯ, ಅರುಣ್ ಕುಮಾರ್, ಕುಮಾರಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು.