ಗೋಣಿಕೊಪ್ಪಲು, ನ. 26: ನಾಗರಹೊಳೆಯಲ್ಲಿ ತಾ. 22 ರಂದು ಗೋಣಿಕೊಪ್ಪಲು ಲಯನ್ಸ್ ಪ.ಪೂ. ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನಿವೃತ್ತ ಅರಣ್ಯಾಧಿಕಾರಿ ಕೆ.ಎಂ. ಚಿಣ್ಣಪ್ಪ, ಮನುಷ್ಯನಿಗೆ ಗಾಳಿ, ನೀರು, ಆಹಾರ ಮತ್ತು ಔಷಧಿಗಳು ಅತಿಮುಖ್ಯ. ಇದೆಲ್ಲವನ್ನೂ ಅರಣ್ಯ ಮಾತ್ರ ನೀಡಲು ಸಾಧ್ಯ. ಅರಣ್ಯ ಬೆಳೆಸಲು ಮನುಷ್ಯನಿಗೆ ಸಾಧ್ಯವಿಲ್ಲ. ಆ ಕೆಲಸವನ್ನು ವನ್ಯಪ್ರಾಣಿಗಳು ಮಾಡುತ್ತವೆ. ಅವುಗಳಿಗೆ ನಾವು ಏನೂ ಮಾಡದಿದ್ದರೆ ಸಾಕಷ್ಟೆ ಎಂದರು.
ಬೇಸಿಗೆಯಲ್ಲಿ ಕಾಡ್ಗಿಚ್ಚು ಕುರಿತು ಶಾಲಾ-ಕಾಲೇಜುಗಳಲ್ಲಿ, ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಸ್ಲೈಡ್ ಶೋ ಮೂಲಕ ಜಾಗೃತಿ, ವೈಲ್ಡ್‍ಲೈಫ್ ಫಸ್ಟ್ ಮೂಲಕ ಅರಣ್ಯ ಅಪರಾಧದ ವಿರುದ್ಧ ಹೋರಾಟ ರೂಪಿಸಿದ್ದು, ಮುಂದೆಯೂ ಇದು ನಿರಂತರ ಕಾರ್ಯಕ್ರಮವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವರ್ಗದಿಂದಲೇ ಜಾಗೃತಿಯಾಗಬೇಕು ಎಂದು ಅಭಿಪ್ರಾಯಪಟ್ಟರು. ಪ್ರಕೃತಿ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಮರಗಿಡಗಳ ಪರಿಚಯ, ಅವುಗಳ ಸ್ಥಳೀಯ ಹೆಸರು ಹಾಗೂ ಸಸ್ಯಶಾಸ್ತ್ರದ ಹೆಸರು, ಪ್ರಾಣಿಗಳ ಆಹಾರ ಪದ್ಧತಿ, ಆಹಾರದ ಬೇಟೆ ಪ್ರಾಣಿಗಳು, ಕಾಡುಗಳು ಇಂಗು ಗುಂಡಿಗಳಂತೆ ನೀರು ಸಂಗ್ರಹಿಸುವ ವಿಧಾನ, ಇರುವೆಯಿಂದ ಆನೆಯವರೆಗೂ ಈ ಪೃಕೃತಿಗಿರುವ ಕೊಡುಗೆಯ ಕುರಿತಾಗಿ ಮಾಹಿತಿ ನೀಡಿದರು. ಲಯನ್ಸ್ ಪ.ಪೂ. ಕಾಲೇಜಿನ 31 ವಿದ್ಯಾರ್ಥಿಗಳು, ಪ್ರಾಂಶುಪಾಲೆ ಪವಿತ್ರಾ ಚಿಣ್ಣಪ್ಪ, ಶಿಕ್ಷಕರಾದ ರೀತಾ, ನಾಣಯ್ಯ, ಉಪ ವಲಯಾರಣ್ಯಾಧಿಕಾರಿ ನವೀನ್ ರಾವತ್, ವೀಕ್ಷಕ ಶಿವಪ್ಪ, ಗಾರ್ಡ್ ಸಂತೋಷ್, ಟಿ.ಎಲ್. ಶ್ರೀನಿವಾಸ್, ಗೋಪಿ ಆರ್.ಕೆ. ಮುಂತಾದವರು ಪ್ರಕೃತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.