ಮಡಿಕೇರಿ, ನ. 24: ಧ್ಯಾನ, ಭಜನೆಗಳ ಉತ್ತುಂಗ ಅನುಭವದಲ್ಲಿ ದೇಹಭಾವ ಮಾಯವಾಗಿ ಆತ್ಮ-ಪರಮಾತ್ಮರ ಸಮ್ಮಿಲನವಾಗುವ ಸುಂದರ ಪ್ರಕ್ರಿಯೆ ನಡೆಯುತ್ತದೆ ಎಂದು ‘ಶಕ್ತಿ’ಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ನುಡಿದರು.ಇಲ್ಲಿನ ಶ್ರೀ ರಾಮಾಂಜನೇಯ ಭಜನಾ ಮಂಡಳಿಯ 29ನೇ ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಸಹಯೋಗದಲ್ಲಿ, ಶ್ರೀ ಆಂಜನೇಯ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಏಕಾಹ ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಭಗವದಾನಂದ ಅನುಭವಿಸುವ ಯೋಗಿಗೂ, ಸಾಮಾನ್ಯರಿಗೂ ವ್ಯತ್ಯಾಸವೆಂದರೆ, ಯೋಗಿಯು ಆನಂದದಲ್ಲಿ ಮುಂದುವರೆಯುತ್ತಾನೆ. ಸಾಮಾನ್ಯನು ಪ್ರಾಪಂಚಿಕದಲ್ಲಿ ಮುಳುಗುತ್ತಾನೆ. ಆದರೆ, ಭಗವದ್ಭಾವವನ್ನು ನಿತ್ಯ ತಂದುಕೊಂಡು; ಅದು ಸ್ವಾಭಾವಿಕವಾಗುವವರೆಗೆ ಅಭ್ಯಾಸ ಮಾಡಬೇಕೆಂದರು.ನಗರದ ಚೌಡೇಶ್ವರಿ ದೇವಾಲಯ ಅರ್ಚಕ ಸತ್ಯೇಶ್ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

(ಮೊದಲ ಪುಟದಿಂದ) ಜಿಲ್ಲೆಯ ವಿವಿಧೆಡೆಗಳಿಂದ ಹತ್ತಾರು ಭಜನಾ ಮಂಡಳಿಗಳು ಪಾಲ್ಗೊಂಡು ಸೂರ್ಯೋದಯದಿಂದ ಸೂರ್ಯಾಸ್ತ ತನಕ ನಿರಂತರ ಭಜನೆಯಲ್ಲಿ ತೊಡಗಿದ್ದವು.

ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್, ಭಜನಾ ಮಂಡಳಿ ಪ್ರಮುಖ ಕೆ.ಕೆ. ಮಹೇಶ್ ಕುಮಾರ್, ಹಿರಿಯರಾದ ಡಾ. ಎಂ.ಜಿ. ಪಾಟ್ಕರ್ ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಸದ್ಭಕ್ತರು ಭಜನೆಯಲ್ಲಿ ಪಾಲ್ಗೊಂಡಿದ್ದರು.