ಕುಶಾಲನಗರ, ನ. 24: ಕುಶಾಲನಗರ ಶ್ರೀ ಗಣಪತಿ ರಥೋತ್ಸವ ಮತ್ತು ಉತ್ಸವ ಬುಧವಾರ ಕಾವೇರಿ ನದಿಯಲ್ಲಿ ತೆಪ್ಪೋತ್ಸವ ಕಾರ್ಯಕ್ರಮ ಜರುಗಿತು. ತೆಪ್ಪೋತ್ಸವ ಅಂಗವಾಗಿ ಕುಶಾಲನಗರದ ಪ್ರಮುಖ ಬೀದಿಗಳಲ್ಲಿ ಜನಪದ ಮೇಳದೊಂದಿಗೆ ದೇವರ ಮೆರವಣಿಗೆ ವಿದ್ಯುತ್ ಅಲಂಕೃತ ರಥದಲ್ಲಿ ನಡೆಸಲಾಯಿತು.

ದೇವಾಲಯದಲ್ಲಿ ಗಣಪತಿ ದೇವರಿಗೆ ಅಷ್ಟಾವಧಾನ ಸೇವೆ, ಮಹಾಮಂಗಳಾರತಿಯೊಂದಿಗೆ ನಡೆದ ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ದುಬಾರೆ ರ್ಯಾಫ್ಟರ್ ಸಹಾಯದೊಂದಿಗೆ ನದಿಯಲ್ಲಿ ತೆಪ್ಪೋತ್ಸವ ಕಾರ್ಯಕ್ರಮ ರಾತ್ರಿ ಅದ್ದೂರಿಯಾಗಿ ನಡೆಯಿತು. ದೇವಾಲಯದ ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರಬಾಬು ನೇತೃತ್ವದಲ್ಲಿ ಅರ್ಚಕ ರಾಘವೇಂದ್ರ ಭಟ್, ಕೃಷ್ಣಮೂರ್ತಿ ಭಟ್, ಸುಬ್ರಮಣ್ಯ ಭಟ್ ಅವರುಗಳು ದಿಢೀರ್ ಸುರಿದ ಮಳೆ ನಡುವೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಸ್ಥಳೀಯ ಸೇವಾರ್ಥದಾರರಿಂದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು. ದೇವಾಲಯ ಕಾರ್ಯಕಾರಿ ಮಂಡಳಿ ಅಧ್ಯಕ್ಷ ವಿ.ಎನ್. ವಸಂತಕುಮಾರ್, ಕಾರ್ಯದರ್ಶಿ ಎಸ್.ಕೆ. ಶ್ರೀನಿವಾಸರಾವ್, ನಿರ್ದೇಶಕರಾದ ಎಂ.ಕೆ. ದಿನೇಶ್, ವಿ.ಪಿ. ಶಶಿಧರ್, ವಿ.ಡಿ. ಪುಂಡರೀಕಾಕ್ಷ, ಎಚ್.ಎನ್. ರಾಮಚಂದ್ರ, ಡಿ.ಅಪ್ಪಣ್ಣ, ವೈ.ಆರ್. ನಾಗೇಂದ್ರ ಮತ್ತಿತರರು ಇದ್ದರು.