ಮಡಿಕೇರಿ, ನ. 24: ನೂತನ ಜಿಲ್ಲಾ ಪಂಚಾಯತ್ ಆಡಳಿತ ಭವನದ ಹಿಂಭಾಗದಲ್ಲಿರುವ ಬೆಟ್ಟದ ನಡುವೆ; ಆರು ವರ್ಷಗಳ ಹಿಂದೆ ಆರಂಭಗೊಂಡಿರುವ ‘ಕೊಡವ ಹೆರಿಟೇಜ್ ಸೆಂಟರ್’ ಕಟ್ಟಡದ ಕಾಮಗಾರಿ ಅಪೂರ್ಣದೊಂದಿಗೆ ಇಂದು ಸಂಪೂರ್ಣ ಕಾಡುಪಾಲಾಗಿರುವ ದುಸ್ಥಿತಿ ಗೋಚರಿಸತೊಡಗಿದೆ. ಆ ದಿನಗಳಲ್ಲಿ ಕೇಂದ್ರ ಸರಕಾರದ ಪ್ರವಾಸೋದ್ಯಮ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿದ್ದ; (ಮೊದಲ ಪುಟದಿಂದ) ಕೊಡಗು ಮೂಲದ ರತಿ ವಿನಯ್‍ಝ ಅವರು ಸ್ವಯಂ ಆಸಕ್ತಿ ವಹಿಸಿ ಕೊಡಗಿನಲ್ಲೊಂದು ಈ ಪಾರಂಪರಿಕ ತಾಣ ನಿರ್ಮಿಸುವ ಪ್ರಯತ್ನಕ್ಕೆ ಮುಂದಾಗಿದ್ದರು.ಆ ದಿಸೆಯಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮುಖಾಂತರ; ಇಲ್ಲಿನ ಸಂಬಂಧಿಸಿದ ಅಧಿಕಾರಿಗಳಿಂದ ಪರಿಶೀಲನೆಯೊಂದಿಗೆ ಸುಮಾರು 5 ಎಕರೆ ಪ್ರದೇಶದಲ್ಲಿ ಕೊಡವ ಪಾರಂಪರಿಕ ತಾಣವನ್ನು ನಿರ್ಮಿಸುವ ಯೋಜನೆ ರೂಪುಗೊಂಡಿತ್ತು. ಪ್ರವಾಸೋದ್ಯಮ ಇಲಾಖೆಯಿಂದ ಮೊದಲ ಹಂತದಲ್ಲಿ ರೂ. 268.04 ಲಕ್ಷಕ್ಕೆ ಕ್ರಿಯಾಯೋಜನೆ ರೂಪಿಸಿ; ಕುಶಾಲನಗರ ಮೂಲದ ಗುತ್ತಿಗೆದಾರರೊಬ್ಬರು ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ಟೆಂಡರ್ ಮೇರೆಗೆ ಈ ಮೊತ್ತಕ್ಕೆ ಹೊಂದಿಕೊಂಡಿದ್ದರು.
ಆರಂಭಿಕವಾಗಿ ಸಂಬಂಧಿಸಿದ ನಿವೇಶನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸಿ; ಕಟ್ಟಡ ಕಾಮಗಾರಿ ಕೂಡ ನಡೆದಿತ್ತು. ಬಳಿಕ ಯಾವದೋ ಕಾರಣಕ್ಕಾಗಿ ಕೆಲಸ ನಿಂತುಹೋಗಿದೆ. ಆಗಿದ್ದ ಗುತ್ತಿಗೆದಾರರಿಗೆ ಒಟ್ಟು ಮೊತ್ತದಲ್ಲಿ ರೂ. 171.93 ಲಕ್ಷ ಹಣವನ್ನು ಪಾವತಿಸಿರುವದಾಗಿ ತಿಳಿದು ಬಂದಿದೆ.
ಕಪ್ಪು ಪಟ್ಟಿಗೆ : ಕಾಮಗಾರಿಯ ಮೊದಲನೆಯ ಕಂತಿನ ಹಣ ಪಡೆದಿರುವ ಗುತ್ತಿಗೆದಾರ ಬಳಿಕ ಸಕಾಲದಲ್ಲಿ ಕೆಲಸ ನಿರ್ವಹಿಸದ ಕಾರಣ; ಆ ವ್ಯಕ್ತಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಗೊತ್ತಾಗಿದೆ. ಅಲ್ಲದೆ ಒಟ್ಟು ಬಿಡುಗಡೆ ಮೊತ್ತದಲ್ಲಿ ಬಾಕಿಯಿರುವ ರೂ. 96.11 ಲಕ್ಷಕ್ಕೆ ಸರಕಾರದ ನಿರ್ದೇಶನದಂತೆ ಲೋಕೋಪಯೋಗಿ ಇಲಾಖೆಯಿಂದ ಕಳೆದ ಜುಲೈನಲ್ಲಿ ಮರು ಟೆಂಡರ್ ಪ್ರಕ್ರಿಯೆಯೊಂದಿಗೆ ಜಿಲ್ಲಾಡಳಿತದಿಂದ ನಿರ್ಮಿತಿ ಕೇಂದ್ರಕ್ಕೆ ಕೆಲಸ ವಹಿಸಿದ್ದಾಗಿ ಗೊತ್ತಾಗಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಈ ಅಪೂರ್ಣ ಕಾಮಗಾರಿಯನ್ನು ಕನಿಷ್ಟ ಮೊತ್ತಕ್ಕೆ ಪೂರೈಸಲು ಸಾಧ್ಯವಿಲ್ಲವೆಂದು ಹಿಂದೆ ಸರಿದಿದ್ದಾಗಿ ಮಾಹಿತಿ ಲಭಿಸಿದೆ.
ಹೀಗಾಗಿ ಲೋಕೋಪಯೋಗಿ ಇಲಾಖೆಯಿಂದ ಪ್ರತ್ಯೇಕ ಟೆಂಡರ್ ಪ್ರಕ್ರಿಯೆಯೊಂದಿಗೆ ರೂ. 97ಲಕ್ಷಕ್ಕೆ ಕಾಮಗಾರಿ ಯೋಜನೆ ರೂಪಿಸಿ; ಗುತ್ತಿಗೆ ನೀಡಿದ್ದರೂ ಇದುವರೆಗೆ ಯಾರೊಬ್ಬರೂ ಕೊಡವ ಹೆರಿಟೇಜ್ ಕೇಂದ್ರದ ಕಾಮಗಾರಿ ಮುಂದುವರಿಸಲು ಮುಂದಾಗುತ್ತಿಲ್ಲ ಎಂದು ಗೊತ್ತಾಗಿದೆ. ಇಂತಹ ಅಸಹಾಯಕ ಪರಿಸ್ಥಿತಿ ನಡುವೆ ಅಂದಾಜು ರೂ. 2 ಕೋಟಿ ಹಣ ವ್ಯರ್ಥಗೊಂಡು; ಕೊಡಗಿನ ಐತಿಹಾಸಿಕ ಹಿನ್ನೆಲೆಯ ಪಾರಂಪರಿಕ ತಾಣವೊಂದು ತಲೆಯೆತ್ತುವ ಮುನ್ನ ಕಾಡುಪಾಲಾದಂತಾಗಿದೆ.
ಈ ಬಗ್ಗೆ ಲೋಕೋಪಯೋಗಿ ಇಲಾಖೆ ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಅಸಹಾಯಕರಾಗಿದ್ದು; 2013-2014ನೇ ಸಾಲಿನಲ್ಲಿ ಬಿರುಸಿನಿಂದ ಒಂದಿಷ್ಟು ಕಾಮಗಾರಿಯೊಂದಿಗೆ ಅಪೂರ್ಣಗೊಂಡಿರುವ ಈ ಕಟ್ಟಡಕ್ಕೆ ಕಾಯಕಲ್ಪ ಕಲ್ಪಿಸುವ ದಿಸೆಯಲ್ಲಿ ಇಲ್ಲಿನ ಜನಪ್ರತಿನಿಧಿಗಳು ಕಾಳಜಿ ತೋರಬೇಕಿದೆ.
 
						