ಕಣಿವೆ, ನ. 24: ಕಳೆದ ಮುಂಗಾರಿನಲ್ಲಿ ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಬೆಳೆದ ಭತ್ತದ ಬೆಳೆ ಈಗ ಕಟಾವಿಗೆ ಅಣಿಗೊಂಡಿದೆ. ಗದ್ದೆಗಳಲ್ಲಿ ಬೆಳೆದು ನಿಂತು ಬಾಗುತ್ತಿರುವ ಭತ್ತದ ಗೊನೆಗಳ ಧಾನ್ಯ ಲಕ್ಷ್ಮಿ ಯನ್ನು ಮನೆ ತುಂಬಿಸಿಕೊಳ್ಳಲು ರೈತಾಪಿ ವರ್ಗ ಸಿದ್ಧಗೊಂಡಿದೆ. ಈ ಬಾರಿಯ ಮುಂಗಾರಿನಲ್ಲಿ ಜೂನ್ ಮತ್ತು ಜುಲೈ ತಿಂಗಳು ಕಳೆದರೂ ಸಕಾಲಿಕವಾದ ಮಳೆಯಾಗದ ಕಾರಣ ಹಾರಂಗಿ ಅಚ್ಚುಕಟ್ಟು ರೈತರು ಬೇಸರಪಟ್ಟು ಮಳೆಗಾಗಿ ಪ್ರಾರ್ಥಿಸಿದರೂ ಪೂಜಿಸಿದರೂ ಕೂಡ ವರುಣ ಕೃಪೆ ತೋರದೇ ಹೋಗಿದ್ದ ಆಗಸ್ಟ್ ಮೊದಲ ವಾರದಲ್ಲಿ ಸುರಿದ ರೌದ್ರವ ಮಳೆಯಿಂದಾಗಿ ಹಾರಂಗಿ ಜಲಾಶಯ ಕೆಲವೇ ದಿನಗಳಲ್ಲಿ ಭರ್ತಿಯಾಗಿತ್ತು. ತಡವಾದ ಮುಂಗಾರಿನಲ್ಲಿ ತಡವರಿಸದೇ ಭತ್ತದ ಕೃಷಿ ಕೈಗೊಂಡ ರೈತರಿಗೆ ಈ ಬಾರಿ ನಿರೀಕ್ಷೆಗೂ ಮೀರಿದ ಭತ್ತದ ಇಳುವರಿ ಬರುವ ವಿಶ್ವಾಸವಿದೆ.
ಕುಶಾಲನಗರ ವ್ಯಾಪ್ತಿಯ ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ 2250 ಹೆಕ್ಟೇರ್ ಹಾಗೂ ಚಿಕ್ಲಿಹೊಳೆ ಜಲಾಶಯದ ಅಚ್ವುಕಟ್ಟು ಪ್ರದೇಶದಲ್ಲಿ 920 ಹೆಕ್ಟೇರ್ ನಲ್ಲಿ ಭತ್ತದ ಕೃಷಿ ಕೈಗೊಳ್ಳಲಾಗಿದೆ ಎಂದು ಕೃಷಿ ಅಧಿಕಾರಿ ಪೂಣಚ್ಚ ‘ಶಕ್ತಿ’ಗೆ ಮಾಹಿತಿ ನೀಡಿದರು. ಬಾಂಗ್ಲಾ, ತುಂಗಾ, ಅತೀರಾ, ಐಇಟಿ, ವಿಎನ್‍ಆರ್ ಹೀಗೆ ಕೃಷಿ ಇಲಾಖೆಯಿಂದ ವಿತರಿಸಲಾದ ಭತ್ತದ ತಳಿಯ ಕೃಷಿ ಮಾಡಲಾಗಿದೆ. ಹಾಗೆಯೇ ಕೆಲವು ರೈತರು ತಾವೇ ಸ್ವತಃ ಸಿದ್ದವಾಗಿಸಿಕೊಂಡ ರಾಜಮುಡಿ, ರಾಜಭೋಗ, ದೊಡ್ಡಿ, ಬಿಳಿಯ, ಸಣ್ಣ ಮಧು ಮೊದಲಾದ ತಳಿಯ ಭತ್ತವನ್ನು ಕೂಡ ರೈತರು ಬೆಳೆದಿದ್ದಾರೆ.
ಮುಂಗಾರಿನ ಆರಂಭದಲ್ಲಿ ಸಕಾಲಿಕವಾದ ಮಳೆಯಾಗದೇ ಹಲವು ರೈತರು ನಷ್ಡ ಅನುಭವಿಸಿದ್ದರು. ಇನ್ನು ಕೆಲವು ರೈತರು ನಾಟಿ ಮಾಡಿದ್ದ ಭತ್ತದ ಸಸಿಮಡಿಗಳ ಗದ್ದೆಗಳಿಗೆ ಕಾವೇರಿ ನದಿಯ ಪ್ರವಾಹದ ನೀರು ನುಗ್ಗಿ ನಷ್ಟಕ್ಕೆ ತುತ್ತಾಗಿದ್ದರು. ಇದೀಗ ಭತ್ತದ ಬೆಳೆ ಗರ್ಭಾವಸ್ಥೆಯಲ್ಲಿರುವ ಸಂದರ್ಭದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕೆಲವೆಡೆ ತಡವಾಗಿ ಭತ್ತದ ನಾಟಿ ಕೈಗೊಂಡಿದ್ದ ರೈತರ ಗದ್ದೆಗಳಲ್ಲಿ ಒಂದಷ್ಟು ಪ್ರಮಾಣದಲ್ಲಿ ಭತ್ತ ಜೆಳ್ಳು ಬೀಳುವ ಸಂಭವವೂ ಇದೆ ಎಂದು ಪೂಣಚ್ಚ ಹೇಳಿದರು.
- ಕೆ.ಎಸ್. ಮೂರ್ತಿ