ಶನಿವಾರಸಂತೆ, ನ. 23: ಇತ್ತೀಚೆಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿಗಳು ಹೆಚ್ಚಾಗಿದ್ದು, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ-ಪ್ರವಚನ ಮಾಡಲು ಅನಾನುಕೂಲವಾಗಿದೆ ಎಂದು ಜಿಲ್ಲಾ ಶಾಲಾಭಿವೃದ್ಧಿ ಸಮಿತಿ ಸಮನ್ವಯ ವೇದಿಕೆ ಅಧ್ಯಕ್ಷ ಹಾಗೂ ರಾಜ್ಯ ಸಂಚಾಲಕ ಕೆ.ವಿ. ನಾಗೇಶ್ ಆಕ್ಷೇಪ ವ್ಯಕ್ತಪಡಿಸಿದರು.

ವರ್ಷದಿಂದ ವರ್ಷಕ್ಕೆ ಸರಕಾರಿ ಶಾಲೆಗಳು ಮುಚ್ಚುವ ಹಂತ ತಲಪುತ್ತಿರುವದು ಖಂಡನೀಯ. ಮಧ್ಯಂತರ ರಜಾ ಅವಧಿ ಮುಗಿದ ನಂತರದಿಂದ ಇಲ್ಲಿಯವರೆಗೂ ಶಿಕ್ಷಕರನ್ನು ತರಬೇತಿಗೆ ನಿಯೋಜನೆ ಮಾಡಿದ್ದು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಅಲ್ಲದೆ ಏಕಕಾಲದಲ್ಲಿ ಒಬ್ಬರಿಗಿಂತಲೂ ಹೆಚ್ಚಿನ ಶಿಕ್ಷಕರನ್ನು ನಿಯೋಜಿಸಿ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.

ಹೀಗೆ ಮುಂದುವರೆದಲ್ಲಿ ಉಳಿದ ಮಕ್ಕಳೂ ಖಾಸಗಿ ಶಾಲೆಯತ್ತ ಮುಖ ಮಾಡುವದರಲ್ಲಿ ಸಂಶಯವಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ತಕ್ಷಣದಿಂದಲೇ ಎಲ್ಲಾ ತರಬೇತಿಗಳನ್ನು ರದ್ದುಗೊಳಿಸಿ ಶಿಕ್ಷಕರು ಶಾಲೆಗಳಲ್ಲೇ ಪಾಠ-ಪ್ರವಚನಗಳಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಶಾಲಾಭಿವೃದ್ಧಿ ಸಮಿತಿ-ಸಮನ್ವಯ ವೇದಿಕೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡು ಎಲ್ಲಾ ಮಕ್ಕಳ ವರ್ಗಾವಣೆ ಪತ್ರ ಪಡೆದು ಖಾಸಗಿ ಶಾಲೆಗಳಿಗೆ ಸೇರಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಅಧ್ಯಕ್ಷ ಕೆ.ವಿ. ನಾಗೇಶ್ ಎಚ್ಚರಿಸಿ, ಆಗ್ರಹಿಸಿದ್ದಾರೆ.

- ನರೇಶ್ಚಂದ್ರ, ಶನಿವಾರಸಂತೆ.