ನಾಪೋಕ್ಲು, ನ. 22: ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಲು ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಹೇಳಿದರು. ಸಮೀಪದ ಚೆಯ್ಯಂಡಾಣೆಯ ನರಿಯಂದಡ ಕೇಂದ್ರ ಪ್ರೌಢಶಾಲೆಯ ರಸ್ತೆ ದುರಸ್ತಿ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮ ಮತ್ತು ಪೋಷಕರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಎಸ್‍ಎಸ್‍ಎಲ್‍ಸಿ ಮಹತ್ವದ ಘಟ್ಟವಾಗಿದ್ದು ವಿದ್ಯಾರ್ಥಿಗಳು ಶ್ರದ್ಧೆಯಿಂದ ಪಾಠ ಪ್ರವಚನಗಳಲ್ಲಿ ತೊಡಗಿಸಿಕೊಂಡು ಉತ್ತಮ ಫಲಿತಾಂಶ ತರಬೇಕು ಎಂದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾಸಂಸ್ಥೆಯ ಅಧ್ಯಕ್ಷ ಚೇನಂಡ ಗಿರೀಶ್‍ಪೂಣಚ್ಚ ಆಡಳಿತ ಮಂಡಳಿ ವತಿಯಿಂದ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಶಾಲಾ ವಾಹನದ ಸೌಲಭ್ಯ ಕಲ್ಪಿಸುವದಾಗಿ ಹೇಳಿದರು. ಮುಖ್ಯ ಶಿಕ್ಷಕ ಮನೋಹರ ನಾಯಕ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳು ಹಾಗೂ ಎಸ್‍ಎಸ್‍ಎಲ್‍ಸಿ ಫಲಿತಾಂಶವನ್ನು ಉತ್ತಮಪಡಿಸಲು ಕೈಗೊಂಡ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು. ಗಣಿತ ಶಿಕ್ಷಕ ಹೆಚ್.ಕೆ. ರಾಜ್‍ಕುಮಾರ್ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು, ನರಿಯಂದಡ ಗ್ರಾಮಪಂಚಾಯಿತಿ ಸದಸ್ಯ ಬೆಳಿಯಂಡ್ರ ರತೀಶ್‍ಕುಮಾರ್ ಶಾಲಾ ಆಡಳಿತ ಮಂಡಳಿ ನಿರ್ದೇಶಕರು ಶಿಕ್ಷಕ ವೃಂದ ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಕಿ ಕೆ.ಡಿ.ಹೇಮಮಾಲಿನ ನಿರೂಪಿಸಿ ಮನೋಹರನಾಯಕ್ ಸ್ವಾಗತಿಸಿದರು. ಶಿಕ್ಷಕಿ ಮಮತಾ ವಂದಿಸಿದರು.