ಸೋಮವಾರಪೇಟೆ,ನ.23: ತಾಲೂಕಿನ ದೊಡ್ಡಮಳ್ತೆ ಗ್ರಾಮದಲ್ಲಿ ನಿನ್ನೆ ರಾತ್ರಿ ಕಾಡಾನೆಗಳ ಹಿಂಡು ಭತ್ತದ ಗದ್ದೆಗೆ ಧಾಳಿ ಮಾಡಿ ಫಸಲು ಹಾನಿಪಡಿಸಿವೆ.
ಮಾಲಂಬಿ ಮೀಸಲು ಅರಣ್ಯದಿಂದ ಬಂದ ಕಾಡಾನೆಗಳು ಗ್ರಾಮದ ಬೋಪಯ್ಯ, ಲಿಂಗರಾಜು, ಡಿ.ಈ.ದಯಾನಂದ ಅವರು ಬೆಳೆದಿದ್ದ ಭತ್ತದ ಪೈರನ್ನು ತುಳಿದು ಭತ್ತವನ್ನು ತಿಂದು ನಷ್ಟಪಡಿಸಿವೆ.
ಭತ್ತ ಫಸಲು ಕೈಸೇರುವ ಹಂತದಲ್ಲೇ ಕಾಡಾನೆಗಳ ಪಾಲಾಗುತ್ತಿದೆ. ಇತ್ತೀಚೆಗಂತೂ ಪ್ರತಿದಿನ ಗದ್ದೆಗಳಿಗೆ ಕಾಡಾನೆಗಳು ಬರುತ್ತಿವೆ ಎಂದು ಕೃಷಿಕ ಬೋಪಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು. ಕಾಡಾನೆಗಳನ್ನು ದೂರದ ಅರಣ್ಯ ಪ್ರದೇಶಕ್ಕೆ ಓಡಿಸಬೇಕು. ಮೀಸಲು ಅರಣ್ಯದ ಸುತ್ತವಿರುವ ಆನೆ ಕಂದಕಗಳನ್ನು ದುರಸ್ತಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.