ಸೋಮವಾರಪೇಟೆ, ನ.23: ತಾಲೂಕಿಗೆ ಹೊಂದಿಕೊಂಡಿರುವ ಹೊಸೂರು ಗ್ರಾಮದ ಬೆಟ್ಟದ ಬಸವೇಶ್ವರಸ್ವಾಮಿಯ ಕೌಟೇಕಾಯಿ ಜಾತ್ರಾ ಮಹೋತ್ಸವ ತಾ. 25ರಂದು ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷರಾದ ಎಚ್.ಕೆ. ಶಾಂತಮಲ್ಲಪ್ಪ ತಿಳಿಸಿದ್ದಾರೆ.

ಸ್ಥಳೀಯ ಜೇಸಿಐ ಸಂಸ್ಥೆಯ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ 11ಕ್ಕೆ ದ್ವಾರದ ಕಮಾನು ಉದ್ಘಾಟನೆ ನಡೆಯಲಿದೆ. 12ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಯಸಳೂರು ತೆಂಕಲಗೂಡು ಮಠದ ಶ್ರೀ ಷಬ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಹೊಸೂರಿನ ಶಾಫಿಯ ಸಯ್ಯದ್ ಧಾರ್ಮಿಕ ಪ್ರವಚನ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯ ಉಜ್ಮಾರಿಜ್ವ ಸುದರ್ಶನ್, ಸಕಲೇಶಪುರ ತಾಲೂಕು ಪಂಚಾಯಿತಿ ಸದಸ್ಯ ಎಸ್. ಮಂಜುನಾಥ್, ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜರೀನಾ ಮಂಜುನಾಥ್, ಲಯನ್ಸ್ ಸಂಸ್ಥೆಯ ವಲಯಾಧ್ಯಕ್ಷ ಎ.ಎಸ್. ಮಹೇಶ್, ಸೋಮವಾರಪೇಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಎ. ಹರೀಶ್, ರೋಟರಿ ಕ್ಲಬ್ ಅಧ್ಯಕ್ಷ ಡಿ.ಪಿ. ರಮೇಶ್, ಕೌಕೋಡಿ ಕಾಫಿ ಎಸ್ಟೇಟ್ ವ್ಯವಸ್ಥಾಪಕರಾದ ಅರುಣ್ ಭಾವೆ ಮತ್ತಿತರರು ಭಾಗವಹಿಸಲಿದ್ದಾರೆ.

ಇದೇ ಸಂದರ್ಭ ಮಂಜೂರು ಗ್ರಾಮದ ದಾನಿಗಳಾದ ಎಂ.ಎಸ್. ಹೂವಣ್ಣ, ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಪತ್ರಕರ್ತ ಹಿರಿಕರ ರವಿಯವರನ್ನು ಸನ್ಮಾನಿಸಲಾಗುವದು. ನಂತರ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಮತ್ತು ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಶಾಂತಮಲ್ಲಪ್ಪ ತಿಳಿಸಿದ್ದಾರೆ.