ಮಡಿಕೇರಿ, ನ. 23: ಮಾಂದಲ್‍ಪಟ್ಟಿ ಪ್ರವಾಸಿ ತಾಣದಲ್ಲಿ ಕೆಲವು ದಿನಗಳ ಹಿಂದೆ ಖಾಸಗಿ ವಾಹನಗಳು ಅಜಾಗರೂಕತೆಯಿಂದ ವಾಹನ ಚಲಾಯಿಸಿ ಅಪಘಾತಗಳು ಸಂಭವಿಸಿರುವದರಿಂದ ಜಿಲ್ಲಾಡಳಿತವು ಖಾಸಗಿ ವಾಹನಗಳ ಚಾಲನೆ ಮೇಲೆ ಕಟ್ಟುನಿಟ್ಟಿನ ನಿರ್ಭಂದವನ್ನು ವಿಧಿಸಿರುತ್ತದೆ. ಅದಾಗ್ಯೂ ಕೆಲವರು ಅನಧಿಕೃತವಾಗಿ ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಅರಣ್ಯ ಪ್ರದೇಶ ಎತ್ತರದ ದುರ್ಗಮ ಕಾಡು ಪ್ರಾಣಿಗಳು ಸಂಚರಿಸುವ ನಿಶಾನಿಮೊಟ್ಟೆ ಭಾಗದಲ್ಲಿ ಸರಕಾರದ ಯಾವದೇ ಅನುಮತಿಯಿಲ್ಲದೇ ಕಾಡನ್ನು ಕತ್ತರಿಸಿ ಕಾಲುದಾರಿಯನ್ನು ಅಗಲೀಕರಿಸಿ ಅಲ್ಲಲ್ಲಿ ಬೆಂಕಿಯನ್ನು ಹಾಕಿ ಕಾಡನ್ನು ನಾಶ ಮಾಡಿ ಪ್ರವಾಸಿಗರನ್ನು ಕರೆತರುತಿದ್ದು, ಈ ಬಗ್ಗೆ ಸಾರ್ವಜನಿಕರು ನೀಡಿರುವ ದೂರಿನ ಮೇರೆಗೆ ಸ್ಥಳಕ್ಕೆ ತೆರಳಿ ಸ್ಥಳದಲ್ಲಿದ್ದ ಬಿಳಿ ನಂಬರ್ ಪ್ಲೇಟ್ ಹೊಂದಿರುವ ಜೀಪ್ (ಕೆಎ 12 ಎಂ 4899)ನ್ನು ಇಲಾಖೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದೆ. ಈ ಅರಣ್ಯ ಪ್ರದೇಶದಲ್ಲಿ ಯಾರೂ ಪ್ರವಾಸಿಗರು ತೆರಳಬಾರದು ಎಂದು ಡಿಸಿಎಫ್ ಪ್ರಭಾಕರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.