ಸೋಮವಾರಪೇಟೆ, ನ. 23: ಸಮೀಪದ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಣಿಮರೂರು ಜೇನುಕುರುಬರ ಹಾಡಿಯ ಮುಂಭಾಗ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯವರು ತಡೆಯೊಡ್ಡಿರುವದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಗೋಣಿಮರೂರಿನ ಜೇನು ಕುರುಬರ ಹಾಡಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಐಟಿಡಿಪಿ ಇಲಾಖೆಯಿಂದ 15 ಲಕ್ಷ ಮಂಜೂರಾಗಿದ್ದು, ಕಾಮಗಾರಿ ಪ್ರಾರಂಭಕ್ಕೆ ಅರಣ್ಯ ಇಲಾಖೆಯಿಂದ ವಿಘ್ನ ಎದುರಾಗಿದೆ. ಸುಮಾರು 150 ಮೀಟರ್ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣಕ್ಕೆ 15 ಲಕ್ಷ ಅನುದಾನ ಬಂದಿದ್ದರೂ ವಿನಿಯೋಗ ಮಾಡಲು ಅವಕಾಶ ಇಲ್ಲದಂತಾಗಿದೆ.

ನಿಡ್ತ ಮೀಸಲು ಅರಣ್ಯದ ಅಂಚಿನಲ್ಲಿರುವ ಗೋಣಿಮರೂರು ಜೇನುಕುರುಬರ ಹಾಡಿಯಲ್ಲಿ 9 ಕುಟುಂಬಗಳಿದ್ದು, ಸೋಮವಾರ ಪೇಟೆ-ಕೊಣನೂರು ರಾಜ್ಯ ಹೆದ್ದಾರಿಯ ಬದಿಯಲ್ಲಿ ರಸ್ತೆ ನಿರ್ಮಾಣಕ್ಕೆ ಕ್ರಿಯಾಯೋಜನೆ ಮಾಡಲಾಗಿದೆ.

ಸುಮಾರು 70 ರಿಂದ 80 ವರ್ಷಗಳಿಂದ ನೆಲೆಸಿರುವ ಈ ಕುಟುಂಬಗಳಿಗೆ ಇದೀಗ ಐಟಿಡಿಪಿ ಇಲಾಖೆಯಿಂದ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದರೂ ಅರಣ್ಯ ಇಲಾಖೆಯ ತಡೆಯಿಂದಾಗಿ ‘ದೇವರು ಕೊಟ್ಟರೂ ಪೂಜಾರಿ ಬಿಡ’ ಎಂಬಂತಾಗಿದೆ.

ಹಾಡಿಯಲ್ಲಿ ಕಾಳಪ್ಪ, ಕರಿಯಪ್ಪ, ಮಲ್ಲೇಶ, ಮನು, ಲೋಕೇಶ್, ಸಿದ್ಧ, ಕಾಳ, ಕೆಂಪ, ರಾಜು ಅವರುಗಳ ಕುಟುಂಬ ನೆಲೆಸಿದ್ದು, ರಸ್ತೆ ಇಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ.

ಪ್ರಸ್ತುತ ಇರುವ ಕಚ್ಚಾರಸ್ತೆ ಗುಂಡಿಮಯವಾಗಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ. ಇಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿದರೆ ಹಾಡಿ ನಿವಾಸಿಗಳಿಗೆ ಹೆಚ್ಚಿನ ಉಪಯೋಗ ವಾಗಲಿದೆ. ಅರಣ್ಯ ಇಲಾಖೆಯ ತಡೆಯ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಮೂಲಭೂತ ಸೌಕರ್ಯಗಳನ್ನು ಒದಗಿಸಲೂ ಸಹ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವದು ಸರಿಯಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಸ್ತೆ ಇರುವ ಸ್ಥಳ ಅರಣ್ಯ ಇಲಾಖೆಗೆ ಸೇರಿದ್ದು, ಇಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡುವದಿಲ್ಲ. ಅರಣ್ಯದ ಗಡಿ ಮತ್ತು ಹಾಡಿಯಲ್ಲಿರುವ ಮನೆಗಳ ನಡುವೆ ಸಾಕಷ್ಟು ಜಾಗವಿದ್ದು, ಆ ಸ್ಥಳದಲ್ಲಿಯೇ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಳ್ಳಲಿ ಎಂದು ಅರಣ್ಯ ಇಲಾಖಾಧಿಕಾರಿಗಳು ಹೇಳುತ್ತಿದ್ದಾರೆ.

ನಿಡ್ತ ಮೀಸಲು ಅರಣ್ಯಕ್ಕೆ ಒತ್ತಿಕೊಂಡಂತೆ ಗೋಣಿಮರೂರು ಜೇನುಕುರುಬರ ಹಾಡಿಯಿದ್ದು, ಅರಣ್ಯದ ಗಡಿಯಿಂದ ಹಾಡಿಯ ಮನೆಗಳಿಗೆ 10 ಅಡಿಗೂ ಅಧಿಕ ಅಂತರವಿದೆ. ಈಗಾಗಲೇ ವಿದ್ಯುತ್ ಕಂಬ, ಕುಡಿಯುವ ನೀರಿನ ಪೈಪ್‍ಗಳು ಅರಣ್ಯದ ಅಂಚಿನಿಂದ ಹೊರಗಿದ್ದು, ಬೇಲಿಯ ಆಚೆ ಬದಿಯಲ್ಲಿ ರಸ್ತೆ ನಿರ್ಮಿಸಿಕೊಳ್ಳಲು ಅವಕಾಶವಿದೆ. ಆದರೂ ಅರಣ್ಯದ ಜಾಗದಲ್ಲಿ ರಸ್ತೆ ನಿರ್ಮಿಸಲು ಯತ್ನಿಸುತ್ತಿರುವದು ಸರಿಯಲ್ಲ. ಇದಕ್ಕೆ ಇಲಾಖೆಯಿಂದ ಅನುಮತಿ ನೀಡುವದಿಲ್ಲ ಎಂದು ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಕೆ. ಕೊಟ್ರೇಶಿ ‘ಶಕ್ತಿ’ಗೆ ತಿಳಿಸಿದ್ದಾರೆ.

ಪ್ರಸ್ತುತ ಇರುವ ಕಚ್ಚಾರಸ್ತೆಯೂ ಸಹ ಅರಣ್ಯ ಇಲಾಖೆಗೆ ಸೇರಿದ್ದಾಗಿದೆ. ಈ ಹಿಂದೆ ಸ್ಥಳೀಯರ ಮನವಿಯ ಮೇರೆಗೆ ಮಣ್ಣಿನ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಲಾಗಿದ್ದು, ಗ್ರಾಮಸ್ಥರು ತೋಟ, ಗದ್ದೆಗಳಿಗೆ ತೆರಳಲು ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಇದೀಗ ಕಾಂಕ್ರೀಟ್ ರಸ್ತೆ ನಿರ್ಮಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ಬಗ್ಗೆ ಸ್ಥಳೀಯರಿಗೆ ತಿಳಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ಒಟ್ಟಾರೆ ಕಳೆದ ಅನೇಕ ದಶಕಗಳಿಂದ ಇದ್ದಂತಹ ಕಚ್ಚಾರಸ್ತೆ ಯನ್ನು ಹಾಡಿವಾಸಿಗಳ ಅನುಕೂಲಕ್ಕಾಗಿ ಕಾಂಕ್ರಿಟೀಕರಣ ಗೊಳಿಸಲು ಇಲಾಖೆಯಿಂದ ಅನುದಾನ ಬಿಡುಗಡೆಯಾಗಿದ್ದರೂ, ಜಾಗದ ಸಮಸ್ಯೆಯಿಂದಾಗಿ ಕಾಮಗಾರಿ ನೆನೆಗುದಿಗೆ ಬೀಳುವಂತಾಗಿದೆ. -ವಿಜಯ್ ಹಾನಗಲ್