ಸೋಮವಾರಪೇಟೆ, ನ. 23: ತೋಟಗಾರಿಕಾ ಇಲಾಖೆ ವತಿಯಿಂದ ಪ್ರಧಾನ ಮಂತ್ರಿ ಕೃಷಿ ಸಂಚಾಯಿ ಯೋಜನೆಯಡಿ ತೊಟಗಾರಿಕಾ ಬೆಳೆಗಳಾದ ಕಾಳುಮೆಣಸು, ತೆಂಗು, ಅಡಿಕೆ, ಬಾಳೆ ಸೇರಿದಂತೆ ಇತರ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ರೈತರು ನೋಂದಾಯಿತ ಸಂಸ್ಥೆಗಳಿಂದ ಹನಿ ನೀರಾವರಿಯನ್ನು ಅಳವಡಿಸಿಕೊಂಡರೆ ಮಾತ್ರ ಸಹಾಯಧನ ನೀಡಬಹುದಾಗಿದ್ದು, ಆಸಕ್ತ ರೈತರು ಇಲಾಖಾ ಮಾರ್ಗಸೂಚಿಯನ್ವಯ ಹನಿ ನೀರಾವರಿ ಅಳವಡಿಸಿಕೊಳ್ಳಲು ಅಗತ್ಯ ದಾಖಲೆಗಳನ್ನು ಕಚೇರಿಗೆ ಸಲ್ಲಿಸಿ ಮುಂಚಿತವಾಗಿ ಕಾರ್ಯಾದೇಶ ಪಡೆದು ನಂತರ ಹನಿ ನೀರಾವರಿಯನ್ನು ಅಳವಡಿಸಿಕೊಳ್ಳಬಹುದಾಗಿದೆ.
ಕೆಲವು ನೋಂದಾಯಿತ ಸಂಸ್ಥೆಯವರು ರೈತರಿಗೆ ಸರಿಯಾಗಿ ಮಾಹಿತಿ ನೀಡದೇ, ಕಾರ್ಯಾದೇಶ ಪಡೆಯದೇ, ಕೆಲಸ ಆದ ನಂತರ ಕಡತವನ್ನು ರೈತರಿಗೆ ನೀಡಿ ಕಳುಹಿಸುತ್ತಿರುವದು ಕಂಡುಬಂದಿದ್ದು, ಇದರಿಂದ ರೈತರು ಹಾಗೂ ಇಲಾಖೆಯ ನಡುವೆ ವೈಮನಸ್ಸು ಮೂಡುತ್ತಿದೆ. ಇಲಾಖೆಯಿಂದ ಕಾರ್ಯಾದೇಶ ಪಡೆಯದೇ ಸಹಾಯಧನ ಕೋರಿ ಸಲ್ಲಿಸುವ ಕಡತಗಳನ್ನು ಮಾನ್ಯ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ರೈತರು ಜಾಗೃತಿ ವಹಿಸಬೇಕೆಂದು ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.