ಸೋಮವಾರಪೇಟೆ, ನ. 22: ಸಾಲ ಬಾಧೆ ಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕೃಷಿಕರೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಕಿರಗಂದೂರು ಗ್ರಾಮದಲ್ಲಿ ನಡೆದಿದೆ.

ಕಿರಗಂದೂರು ಗ್ರಾಮದ ದಿ. ತಮ್ಮಯ್ಯ ಎಂಬವರ ಪುತ್ರ ವಿನೋದ್ (35) ಎಂಬವರೇ ಆತ್ಮಹತ್ಯೆಗೆ ಶರಣಾದವರು. ಕಿರಗಂದೂರು ಗ್ರಾಮದಲ್ಲಿ ಕೃಷಿ ಜಮೀನು ಹೊಂದಿದ್ದ ವಿನೋದ್ ಅವರು, ಕೃಷಿಗೆ ಕೈಸಾಲ ಪಡೆದಿದ್ದರು. ಇದರೊಂದಿಗೆ ಚಿನ್ನಾಭರಣಗಳನ್ನು ವಿಎಸ್‍ಎಸ್‍ಎನ್, ಖಾಸಗಿ ಫೈನಾನ್ಸ್‍ನಲ್ಲಿಟ್ಟು ಸಾಲ ಪಡೆದಿದ್ದರು.

ಪ್ರಸಕ್ತ ವರ್ಷದ ಅಕಾಲಿಕ ಮಳೆಯಿಂದ ಕೃಷಿಯೂ ನಷ್ಟದ ಹಾದಿಯಲ್ಲಿತ್ತು. ಇದರಿಂದ ಬೇಸತ್ತಿದ್ದ ವಿನೋದ್ ಅವರು ಇಂದು 11.30ರ ಸುಮಾರಿಗೆ ತಮ್ಮ ಮನೆಯಲ್ಲೇ ವಿಷ ಸೇವಿಸಿದ್ದಾರೆ. ಕೆಲ ಸಮಯದ ನಂತರ ಪತ್ನಿ ವಾಣಿ ಅವರಿಗೆ ಸಂಶಯ ಬಂದು ಪರಿಶೀಲನೆ ನಡೆಸಿದಾಗ, ವಿಷ ಸೇವಿಸಿರುವದು ಖಾತ್ರಿಯಾಗಿದೆ. ತಕ್ಷಣ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲು ಯತ್ನಿಸಿದರೂ ಫಲಕಾರಿ ಯಾಗದೇ ಮಧ್ಯಾಹ್ನ 2.30ಕ್ಕೆ ಕೊನೆಯುಸಿರೆಳೆದಿದ್ದಾರೆ. ತಾವು ಪಡೆದಿದ್ದ ಕೈಸಾಲ, ಚಿನ್ನಾಭರಣಗಳ ಮೇಲಿನ ಸಾಲದ ಮಾಹಿತಿಯನ್ನು ಚೀಟಿಯಲ್ಲಿ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ವಿನೋದ್ ಪತ್ನಿ ವಾಣಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೃತ ವಿನೋದ್ ಮೂರೂವರೆ ಹಾಗೂ ಒಂದೂವರೆ ವರ್ಷದ ಈರ್ವರು ಗಂಡು ಮಕ್ಕಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. 23ರಂದು (ಇಂದು) ಸ್ವಗ್ರಾಮದಲ್ಲಿ ನಡೆಯಲಿದೆ.