ಸೋಮವಾರಪೇಟೆ, ನ. 22: ಇತ್ತೀಚೆಗಷ್ಟೇ ಲಿಂಗೈಕ್ಯರಾದ ಇಲ್ಲಿನ ವಿರಕ್ತ ಮಠಾಧೀಶರಾಗಿದ್ದ ಶ್ರೀ ವಿಶ್ವೇಶ್ವರ ಸ್ವಾಮೀಜಿಗಳ ಪುಣ್ಯಾರಾಧನಾ ಮಹೋತ್ಸವ ತಾ. 25ರಂದು ನಡೆಯಲಿದ್ದು, ಅಂದೇ ವಿರಕ್ತ ಮಠಕ್ಕೆ ನೂತನ ಮಠಾಧೀಶರ ನೇಮಕವೂ ಜರುಗಲಿದೆ ಎಂದು ವೀರಶೈವ ಸಮಾಜದ ಕಾರ್ಯದರ್ಶಿ ಜೆ.ಸಿ. ಶೇಖರ್ ತಿಳಿಸಿದ್ದಾರೆ.

ಇಲ್ಲಿನ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 36 ವರ್ಷಗಳಿಂದ ಮಠದ ಮೂಲಕ ಹಲವಷ್ಟು ಸಾಮಾಜಿಕ, ಧಾರ್ಮಿಕ ಸೇವೆಗಳನ್ನು ನಡೆಸಿಕೊಂಡು ಬರುತ್ತಿದ್ದ ವಿಶ್ವೇಶ್ವರ ಸ್ವಾಮೀಜಿಗಳು ನಿಧನರಾದ ಹಿನ್ನೆಲೆ, ಚಿತ್ರದುರ್ಗದ ಮುರುಘಾ ರಾಜೇಂದ್ರ ಬೃಹನ್ಮಠದ ಮೂಲಕ ನೂತನ ಮಠಾಧೀಶರ ನೇಮಕ ನಡೆಯಲಿದೆ ಎಂದರು.

ತಾ. 25ರಂದು ಬೆಳಿಗ್ಗೆ 7 ಗಂಟೆಗೆ ವಿಶ್ವೇಶ್ವರ ಸ್ವಾಮೀಜಿಗಳ ಗದ್ದುಗೆಯಲ್ಲಿ ಪುಣ್ಯಾರಾಧನೆ ನಡೆಯಲಿದೆ. 10.30ಕ್ಕೆ ಶ್ರೀಮಠದ ಆವರಣದಲ್ಲಿ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿವೆ. ಹೆಬ್ಬಾಳು ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ, ರಾವಂದೂರು ಮಠದ ಮೋಕ್ಷಪತಿ ಸ್ವಾಮೀಜಿ, ಬಸವಾಪಟ್ಟಣದ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ, ಕನ್ನಡ ಮಠದ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿ ಅವರುಗಳು ಭಾಗವಹಿಸಲಿದ್ದಾರೆ.

ಇದರೊಂದಿಗೆ ಮುದ್ದಿನಕಟ್ಟೆ ಮಠಾಧೀಶರಾದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ತೊರೆನೂರಿನ ಮಲ್ಲೇಶ ಸ್ವಾಮೀಜಿ, ಮನೆಹಳ್ಳಿಯ ಮಹಾಂತ ಶಿವಲಿಂಗ ಸ್ವಾಮೀಜಿ, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ ಅವರುಗಳ ಸಮ್ಮುಖದಲ್ಲಿ ಪುಣ್ಯಾರಾಧನೆ ನಡೆಯಲಿದೆ ಎಂದು ಜೆ.ಸಿ. ಶೇಖರ್ ತಿಳಿಸಿದರು.

ಕಾರ್ಯಕ್ರಮಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ವೀರಶೈವ ಸಮಾಜ, ಅಕ್ಕನ ಬಳಗ, ಬಸವೇಶ್ವರ ಯುವಕ ಸಂಘದ ಪ್ರಮುಖರು ಆಗಮಿಸಲಿದ್ದಾರೆ. ದಾವಣಗೆರೆಯ ಬಸವ ಕಲಾಲೋಕ ತಂಡದಿಂದ ಭಜನೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ವೀರಶೈವ ಸಮಾಜದ ಯಜಮಾನ ಕೆ.ಎನ್. ಶಿವಕುಮಾರ್, ಶೆಟ್ರು ಕೆ.ಎನ್. ತೇಜಸ್ವಿ, ಅಕ್ಕನ ಬಳಗದ ಅಧ್ಯಕ್ಷೆ ಜಲಜಾ ಶೇಖರ್ ಅವರುಗಳು ಉಪಸ್ಥಿತರಿದ್ದರು.