ಸೋಮವಾರಪೇಟೆ, ನ. 22: ಸಮೀಪದ ಸಿದ್ಧಲಿಂಗಪುರದ ಅರಿಶಿಣಗುಪ್ಪೆ ಗ್ರಾಮದಲ್ಲಿರುವ ಶ್ರೀಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ಪಂಚಮಿಯ ಅಂಗವಾಗಿ ವಿಶೇಷ ಪೂಜೆಗಳು ಜರುಗಿದವು.
ಬೆಳಿಗ್ಗೆ ಮಂಜುನಾಥ ಸನ್ನಿಧಿಯಲ್ಲಿ ಗಣಪತಿ ಹೋಮ, ವಿಶೇಷ ಪೂಜೆ, ರುದ್ರಾಭಿಷೇಕ ನಡೆಯಿತು. ನಂತರ ನವನಾಗನ ಸನ್ನಿಧಿಯಲ್ಲಿ ತಂಬಿಲ ಪೂಜೆ ಮತ್ತು ಅಭಿಷೇಕ ನಡೆಯಿತು.
ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನ ಪ್ರಸಾದವನ್ನು ವಿತರಿಸಲಾಯಿತು. ದೇವಾಲಯದ ಗುರುಗಳಾದ ರಾಜೇಶ್ನಾಥ್ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಜಗದೀಶ್ ಉಡುಪ ಅವರ ಪೌರೋಹಿತ್ಯದಲ್ಲಿ ಪೂಜಾ ಕೈಂಕರ್ಯಗಳು ನಡೆಯಿತು.
ಈ ಸಂದರ್ಭ ರಾಜೇಶ್ನಾಥ್ ಮಾತನಾಡಿ, ದೇವಾಲಯದ ನಿರ್ಮಾಣಕ್ಕೆ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ ಮತ್ತು ನಾಪಂಡ ಮುದ್ದಪ್ಪ ಸೇರಿದಂತೆ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ದುಡಿಯುತ್ತಿರುವದಾಗಿ ತಿಳಿಸಿದರು.
ತಮಿಳುನಾಡಿನ ತಿರುವಣ್ಣಾಮಲೈ ಶೈಲಿಯಲ್ಲಿರುವ ನಂದಾದೀಪವನ್ನು ಹೋಲುವ ಅಂದಾಜು ರೂ. 30 ಸಾವಿರದ ದೀಪವನ್ನು ಕೂಡ್ಲೂರು ಗ್ರಾಮದ ಉದ್ಯಮಿ ಸಿ.ಪಿ. ಜವಹರ್ ದಂಪತಿಗಳು ದೇವಾಲಯಕ್ಕೆ ಸಮರ್ಪಿಸಿದ್ದಾರೆ. ಇದರೊಂದಿಗೆ ನವನಾಗನ ಸನ್ನಿಧಿಯಲ್ಲಿ ಸೋಲಾರ್ ದೀಪವನ್ನು ಬೆಂಗಳೂರಿನ ಲಕ್ಷ್ಮಣ್ ಅವರು ಒದಗಿಸಿದ್ದಾರೆ.
ಅಲ್ಲದೆ ದೇವಾಲಯಕ್ಕೆ ಕುಡಿಯಲು ಅಗತ್ಯವಿದ್ದ ಬೋರ್ವೆಲ್ಗಳನ್ನು ರೂ. 80 ಸಾವಿರ ವೆಚ್ಚದಲ್ಲಿ ಕುಶಾಲನಗರದ ಉದ್ಯಮಿ ಸಂತೋಷ್ ವ್ಯವಸ್ಥೆ ಮಾಡಿದ್ದಾರೆ ಎಂದರು. ದೇವಾಲಯಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಅತೀ ಶೀಘ್ರದಲ್ಲಿ ಒದಗಿಸುವಂತೆ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರಿಗೆ ಮನವಿ ಮಾಡಿದರು.
ಈ ಸಂದರ್ಭ ಸೋಮವಾರಪೇಟೆ ತಾಲೂಕು ಕಚೇರಿಯ ಕಂದಾಯ ನಿರೀಕ್ಷಕ ವಿನೋದ್, ಸಿಬ್ಬಂದಿ ಚೇತನ್, ಮುಳ್ಳೂಸೋಗೆ ಗ್ರಾ.ಪಂ. ಉಪಾಧ್ಯಕ್ಷ ತಾರಾನಾಥ್, ಸದಸ್ಯ ಶಿವಾನಂದ್, ದೇವಾಲಯ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.