ಸೋಮವಾರಪೇಟೆ, ನ. 23: ಕಳೆದ ಐದಾರು ದಶಕಗಳಿಂದ ಗುಣಮಟ್ಟದ ಜೇನುತುಪ್ಪ ಉತ್ಪಾದಿಸಿ ಕಡಿಮೆ ದರಕ್ಕೆ ಮಾರಾಟ ಮಾಡಿ ಹೆಸರುಗಳಿಸಿದ್ದ ಸೋಮವಾರ ಪೇಟೆಯ ಪುಷ್ಪಗಿರಿ ತಪ್ಪಲಿನ ಗ್ರಾಮಗಳಲ್ಲಿ ಇದೀಗ ಜೇನು ನೊಣಗಳಿಗೆ ಮಾರಕ ರೋಗ ಬಾಧೆ ಕಾಣಿಸಿಕೊಂಡಿದೆ. ಕೋಶಾವಸ್ಥೆಯ ಜೇನು ಹುಳುಗಳು ಪೆಟ್ಟಿಗೆಯಲ್ಲೇ ಸಾಯುತ್ತಿದ್ದರೆ, ಉಳಿದವಗಳಿಗೆ ಕೆಂಜಿಗೆ ಹಾವಳಿ ಬಾಧಿಸಲಾರಂಭಿಸಿವೆ. ಪರಿಣಾಮ ಜೇನು ಕೃಷಿಕರು ಕಂಗಾಲಾಗಿದ್ದಾರೆ.
ಸೋಮವಾರಪೇಟೆ ನಗರದಿಂದ 20 ಕಿ.ಮೀ. ದೂರದ ಬೆಟ್ಟದಳ್ಳಿ ಗ್ರಾ.ಪಂ. ವ್ಯಾಪ್ತಿಯ ಇನಕನಹಳ್ಳಿ, ಬಾಚಳ್ಳಿ, ಬೆಟ್ಟದಕೊಪ್ಪ, ಕುಮಾರಳ್ಳಿ, ಹೆಗ್ಗಡಮನೆ, ಹಂಚಿನಳ್ಳಿ, ಕೊತ್ತನಳ್ಳಿ, ಬೀದಳ್ಳಿ, ಮಲ್ಲಳ್ಳಿ, ಜಕ್ಕನಳ್ಳಿ ಮತ್ತಿತರ ಗ್ರಾಮಗಳಲ್ಲಿ ಜೇನು ಸಂತತಿಗೆ ಕಳೆದೆರಡು ವರ್ಷದ ಹಿಂದೆ ಮಾರಕ ರೋಗ ತಗುಲಿದ ಪರಿಣಾಮ ಪೆಟ್ಟಿಗೆಯಲ್ಲಿದ್ದ ಜೇನು ಹುಳುಗಳು ಅಂತ್ಯ ಕಂಡವು. ಹುಳು ಸತ್ತು ಹೋದ ನಂತರ ಕೆಟ್ಟ ವಾಸನೆಯಿಂದ ಉಳಿದ ಜೇನ್ನೊಣಗಳು ಸಾಮೂಹಿಕವಾಗಿ ವಲಸೆ ಹೋಗುತ್ತಿದ್ದವು. ಇದರಿಂದಾಗಿ ಜೇನು ಕಟ್ಟಬೇಕಾದ ಪೆಟ್ಟಿಗೆಗಳು ಖಾಲಿಯಾಗುತ್ತಿದ್ದು, ಅರಣ್ಯದಿಂದ ಹರಸಾಹಸ ಮಾಡಿ ಜೇನ್ನೊಣಗಳನ್ನು ಪೆಟ್ಟಿಗೆಯಲ್ಲಿ ಸಂಗ್ರಹಿಸಿ ಜೇನು ಕೃಷಿಯಲ್ಲಿ ತೊಡಗಿದವರಿಗೆ ಇಂತಹ ಮಾರಕ ರೋಗ ಆಘಾತ ಉಂಟುಮಾಡಿದೆ. ಜೇನ್ನೊಣಗಳಿಗೆ ಬಾಧಿಸುತ್ತಿರುವ ಮಾರಕ ರೋಗ ತಿಳಿಯದೇ ಕೃಷಿಕರ ನೆಮ್ಮದಿ ಹಾಳಾಗಿದೆ.
1993ರಲ್ಲಿ ಇದೇ ರೀತಿ ರೋಗ ಕಾಣಿಸಿಕೊಂಡು ಜೇನು ಕೃಷಿಯಿಂದ ಭಾರೀ ನಷ್ಟ ಅನುಭವಿಸಿದ್ದೆವು. ಇದೀಗ ಮತ್ತೆ ಮಾರಕ ರೋಗ ಕಾಣಿಸಿಕೊಂಡು ಜೇನು ತುಪ್ಪ ಉತ್ಪಾದನೆ ಕಡಿಮೆಯಾಗುತ್ತಿದ್ದು, ನಷ್ಟ ಅನುಭವಿಸುವಂತಾಗಿದೆ ಎಂದು ಜೇನು ಕೃಷಿಕರು ಅಳಲು ತೋಡಿ ಕೊಂಡಿದ್ದಾರೆ.
ಪುಷ್ಪಗಿರಿ ತಪ್ಪಲಿನ ಎಲ್ಲಾ ಗ್ರಾಮಗಳಲ್ಲೂ ಜೇನು ಕೃಷಿಗೆ ಪೂರಕವಾದ ವಾತಾವರಣವಿದೆ. ಗ್ರಾಮಗಳ ಸುತ್ತ ಒಳ್ಳೆಯ ಪರಿಸರವಿದ್ದು, ದಟ್ಟಾರಣ್ಯವೇ ಅಧಿಕವಿರುವ ಹಿನ್ನೆಲೆ ಕಾಡುಜಾತಿಯ ಗಿಡಮರ,ಬಳ್ಳಿಗಳಲ್ಲಿ ಬಿಡುವ ವಿವಿಧ ಬಗೆಯ ಹೂಗಳಿಂದ ಮಕರಂದ ಹೀರಿ ಪೆಟ್ಟಿಗೆಗಳಲ್ಲಿ ಸಂಗ್ರಹಿಸಲ್ಪಡುತ್ತಿದ್ದ ಜೇನಿಗೆ ಹೆಚ್ಚಿನ ಬೇಡಿಕೆಯೂ ಇತ್ತು. ವಾರ್ಷಿಕವಾಗಿ 300 ಇಂಚಿನಷ್ಟು ಮಳೆಯಾಗುವ ಈ ಭಾಗದ ರೈತರು ಭತ್ತ, ಏಲಕ್ಕಿ, ಕಾಫಿ ಕೃಷಿಗೆ ಪ್ರಾಧಾನ್ಯತೆ ನೀಡಿದ್ದರೂ ಕಳೆದ ಹಲವು ದಶಕಗಳಿಂದ ಜೇನು ಕೃಷಿಯಿಂದ ಆರ್ಥಿಕ ಸಬಲತೆ ಕಂಡಿದ್ದರು.
ಅತಿವೃಷ್ಟಿ-ಅನಾವೃಷ್ಟಿಯಿಂದ ಬೆಳೆ ನಾಶವಾದ ಸಂದರ್ಭಗಳಲ್ಲಿ ಕೃಷಿಕರ ಆರ್ಥಿಕ ರಕ್ಷಣೆ ಮಾಡಿದ್ದೇ ಜೇನು ಕೃಷಿ ಎಂಬದು ಈ ವ್ಯಾಪ್ತಿಯ ಕೃಷಿಕರ ಅಭಿಪ್ರಾಯ. ಇನಕನಹಳ್ಳಿ ಗ್ರಾಮದ ಪ್ರಗತಿಪರ ಕೃಷಿಕ ಉತ್ತಯ್ಯ ಕುಟುಂಬ ಕಳೆದ ಆರು ದಶಕದಿಂದ ಜೇನು ಕೃಷಿ ಮಾಡುತ್ತಿದ್ದು, 1985 ರಲ್ಲಿ ಕೇವಲ
(ಮೊದಲ ಪುಟದಿಂದ) 50 ಜೇನು ಪೆಟ್ಟಿಗೆಯಲ್ಲಿ 900 ಕೆ.ಜಿ. ಜೇನುತುಪ್ಪ ಉತ್ಪಾದಿಸಿ ಕೊಡಗು ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಗಳಿಸಿದ್ದ ದಾಖಲೆಯಿದೆ.
ಈ ವ್ಯಾಪ್ತಿಯಲ್ಲಿ ಕಂಡುಬರುತ್ತಿರುವ ರೋಗಬಾಧೆಯಿಂದ ಜೇನು ಹುಳುಗಳು ಸಾಮೂಹಿಕವಾಗಿ ಹಾರಿ ಹೋಗಿದ್ದು, ರೋಗ ನಿಯಂತ್ರಣಕ್ಕೆ ಯಾವದೇ ಔಷಧಿಗಳು ಇಲ್ಲದ ಕಾರಣ ಮುಂದಿನ ದಿನಗಳಲ್ಲಿ ಜೇನುಕೃಷಿಯನ್ನು ಕೈಗೊಳ್ಳುವದಾದರೂ ಹೇಗೆ? ಎಂಬ ಪ್ರಶ್ನೆ ಕೃಷಿಕರನ್ನು ಕಾಡುತ್ತಿದೆ.
ಗಾಳಿ ಮರಗಳಿಂದಲೂ ಸಂಕಷ್ಟ: ಪುಷ್ಪಗಿರಿ ಬೆಟ್ಟಶ್ರೇಣಿಯಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಬೆಳೆಯಲಾಗಿರುವ ಗಾಳಿಮರಗಳಿಂದಾಗಿ ಜೇನು ಹುಳುಗಳು ಯಥೇಚ್ಛವಾಗಿ ಸಾವನ್ನಪ್ಪುತ್ತಿವೆ ಎನ್ನಲಾಗಿದೆ.
ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಗಾಳಿಮರದಲ್ಲಿ ಹೂವುಗಳು ಅರಳುವ ಸಮಯವಾಗಿದ್ದು, ಇದರಲ್ಲಿ ಯಥೇಚ್ಛವಾಗಿ ಅಂಟು ದ್ರವ ಇರುತ್ತದೆ. ಇಂತಹ ಹೂಗಳ ಮೇಲೆ ಕುಳಿತು ಮಕರಂದ ಹೀರುವ ಜೇನುಹುಳಗಳು ನಂತರ ಅಲ್ಲಿಯೇ ಅಂಟಿಕೊಂಡು ಸಾವನ್ನಪ್ಪುತ್ತಿವೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಗಾಳಿಮರಗಳಲ್ಲಿ ಹೂ ಬಿಡುವ ಮೊದಲೇ ರೆಂಬೆಗಳನ್ನು ಕತ್ತರಿಸಬೇಕು ಎಂದು ಬೆಟ್ಟದಳ್ಳಿ ಗ್ರಾಮದ ಜೇನು ಕೃಷಿಕ ಮೋಟನಾಳಿರ ರಾಜಪ್ಪ ಅವರು ‘ಶಕ್ತಿ’ಯೊಂದಿಗೆ ಅಭಿಪ್ರಾಯಿಸಿದ್ದಾರೆ.
ಅಳಿದುಳಿದ ಜೇನು ಪೆಟ್ಟಿಗೆಗಳಿಗೆ ಇದೀಗ ಕೆಂಜಿಗೆ ಜಾತಿಗೆ ಸೇರಿದ ಇರುವೆಗಳು ಧಾಳಿ ಇಡುತ್ತಿದ್ದು, ಕೈಗೆ ಸಿಗಬೇಕಾದ ಜೇನು ಇರುವೆಗಳ ಪಾಲಾಗುತ್ತಿದೆ. ನಾವುಗಳು ಕಷ್ಟಪಟ್ಟು ಕೈಗೊಳ್ಳುವ ಜೇನು ಕೃಷಿ ಕಣ್ಣೆದುರೇ ಮಣ್ಣುಪಾಲಾಗುತ್ತಿರುವದನ್ನು ನೋಡಿದರೆ ಸಂಕಟವಾಗುತ್ತದೆ. ಕೆಂಜಿಗೆ ಇರುವೆಗಳಿಂದ ಜೇನು ಪೆಟ್ಟಿಗೆಯನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದೇ ತಿಳಿಯುತ್ತಿಲ್ಲ ಎಂದು ರಾಜಪ್ಪ ಅವರು ಅಳಲುತೋಡಿಕೊಂಡಿದ್ದಾರೆ.
ಪ್ರಸಕ್ತ ವರ್ಷ ಕಾಡು ಮೇಡು ಅಲೆದು ಜೇನು ಹುಳಗಳನ್ನು ಸಂಗ್ರಹಿಸಿ ತಮ್ಮ ತೋಟದಲ್ಲಿ 14 ಪೆಟ್ಟಿಗೆಗಳನ್ನು ಇಡಲಾಗಿತ್ತು. ಕೆಲವೇ ತಿಂಗಳುಗಳಲ್ಲಿ ಪೆಟ್ಟಿಗೆಯಿಂದ ಹುಳುಗಳು ನಾಪತ್ತೆಯಾಗಿವೆ. ಕೆಂಜಿಗೆಯ ಹಾವಳಿ ತಪ್ಪಿಸಲು ಮಾರ್ಗಗಳೇ ಕಾಣುತ್ತಿಲ್ಲ ಎಂದು ರಾಜಪ್ಪ ನಿರಾಶೆಯ ನುಡಿಯಾಡಿದ್ದಾರೆ.
ಒಟ್ಟಾರೆ ಹಲವು ದಶಕಗಳಿಂದ ಕೃಷಿಕರ ಆದಾಯದ ಮೂಲವಾಗಿದ್ದ ಜೇನು ಕೃಷಿ, ನಿರ್ಲಕ್ಷ್ಯಕ್ಕೆ ಒಳಗಾಗಿ ‘ಇತಿಶ್ರೀ’ ಹೇಳುವ ಮೊದಲೇ ತೋಟಗಾರಿಕಾ ಇಲಾಖೆಯೊಂದಿಗೆ ವಿಲೀನಗೊಂಡಿರುವ ಜೇನು ಕೃಷಿ ಇಲಾಖೆ ಇತ್ತ ಗಮನಹರಿಸಬೇಕಾಗಿದೆ. ಹುಳಗಳಿಗೆ ತಗುಲಿರುವ ರೋಗಬಾಧೆ ಯಾವದು? ಇದರಿಂದ ಹುಳಗಳನ್ನು ರಕ್ಷಿಸುವ ಬಗೆ ಹೇಗೆ? ಕೆಂಜಿಗೆ ಹಾವಳಿಯಿಂದ ಜೇನುಪೆಟ್ಟಿಗೆಗಳ ರಕ್ಷಣೆ ಹೇಗೆ ಎಂಬ ಬಗ್ಗೆ ವೈಜ್ಞಾನಿಕವಾಗಿ ಸಂಶೋಧನೆ ನಡೆಸಿ, ಸ್ವಾದಿಷ್ಟ ಜೇನು ಉತ್ಪಾದಿಸುವ ಕೃಷಿಕರ ರಕ್ಷಣೆಗೆ ಮುಂದಾಗಬೇಕಿದೆ. ಜೇನು ಕೃಷಿಕೈಗೊಳ್ಳುವ ಕೃಷಿಕರಿಗೆ ಮಾಹಿತಿ, ಮಾರ್ಗದರ್ಶನ ನೀಡಬೇಕಿದೆ.