ಮಡಿಕೇರಿ, ನ. 23: ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ದೇಶದ ಸಂವಿಧಾನದ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂಬ ಆಕ್ಷೇಪದೊಂದಿಗೆ ತಾ. 25 ರಂದು (ನಾಳೆ) ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ವಿವಿಧ ದಲಿತ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಮೂರ್ನಾಡು ಹೋಬಳಿ: ಪ್ರತಿಭಟನಾ ರ್ಯಾಲಿಗೆ ಮೂರ್ನಾಡು ಹೋಬಳಿ ದಲಿತ ಸಂಘರ್ಷ ಸಮಿತಿಯ ಸಂಚಾಲಕರುಗಳಾದ ಈರ ಸುಬ್ಬಯ್ಯ, ರವಿ, ರಘು ಬೈರ, ಬೋಜ ಸಣ್ಣಯ್ಯ ಅವರುಗಳು ತಿಳಿಸಿದ್ದಾರೆ.

ಅಲ್ಪಸಂಖ್ಯಾತ ಘಟಕ: ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರದ ಶಿಕ್ಷಣ ಇಲಾಖೆಯ ಮುಖಾಂತರ ಒಂದು ಕೈಪಿಡಿ ರಚಿಸಿ ಅದರಲ್ಲಿ ಸಂವಿಧಾನ ರಚನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದರೇ ಹೊರತು ಸಂವಿಧಾನ ರಚಿಸುವಲ್ಲಿ ಅಂಬೇಡ್ಕರ್‍ರವರ ಪಾತ್ರ ಅಷ್ಟೇನೂ ಇಲ್ಲ. ಉಳಿದ 6 ಜನ ಸಂವಿಧಾನ ಕರಡು ಸಮಿತಿಯ ಸದಸ್ಯರೇ ಶ್ರಮವಹಿಸಿ ಸಂವಿಧಾನ ರಚಿಸಿದ್ದು ಎಂದು ಸಂವಿಧಾನ ದಿನಾಚರಣೆಯ ಪ್ರಯುಕ್ತ ಹೊರ ತಂದಿರುವ ಕೈ ಪಿಡಿಯನ್ನು ಹೊರ ತಂದು ‘ಸಂವಿಧಾನ’ ತಿರುಚುವ ಕೆಲಸವನ್ನು ತೀವ್ರವಾಗಿ ಖಂಡಿಸುತ್ತೇವೆಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಎ.ಕೆ. ಹಾರಿಸ್ ತಮ್ಮ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಇದರ ಪಾತ್ರಧಾರಿಗಳಾದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಮತ್ತು ರಾಜ್ಯ ಸರ್ಕಾರದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ರಾಜ್ಯ ಸಚಿವ ಸಂಪುಟದಿಂದ ಕೈಬಿಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಆದಿಜಾಂಭವ ಯುವ ಸೇನೆ: ಪ್ರತಿಭಟನೆಗೆ ಕರ್ನಾಟಕ ಆದಿಜಾಂಭವ ಯುವಸೇನೆ ಬೆಂಬಲ ನೀಡಲಿದೆ ಎಂದು ರಾಜ್ಯಾಧ್ಯಕ್ಷ ಡಾ. ರಮೇಶ್ ಚಕ್ರವರ್ತಿ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಂವಿಧಾನ ರಚನೆ ಪ್ರಾರಂಭದಿಂದ ಅಂತಿಮ ಹಂತದವರೆಗೆ ಸಂವಿಧಾನ ರಚನೆಯಲ್ಲಿ ಮುಖ್ಯ ಪಾತ್ರ ವಹಿಸಿದ ಡಾ.ಅಂಬೇಡ್ಕರ್ ಅವರಂತಹಾ ಮಹಾನ್ ವ್ಯಕ್ತಿಯ ಬಗ್ಗೆ ಹೇಳಿಕೆ ನೀಡಿರುವದು ಸರಿಯಲ್ಲ. ಕರ್ನಾಟಕ ಆದಿ ಜಾಂಭವ ಯುವಸೇನೆ ಮಡಿಕೇರಿಯಲ್ಲಿ ನಡೆಯಲಿರುವ ಶಾಂತಿಯುತ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿ ಕೊಳ್ಳಲಿದೆ ಎಂದರು.

ತಾಲೂಕು ದ.ಸಂ.ಸ: ಪ್ರತಿಭಟನಾ ಮೆರವಣಿಗೆಗೆ ಮಡಿಕೇರಿ ತಾಲೂಕು ದಲಿತ ಸಂಘರ್ಷ ಸಮಿತಿ ಬೆಂಬಲ ಸೂಚಿಸುತ್ತದೆ ಎಂದು ಸಮಿತಿಯ ತಾಲೂಕು ಸಂಘಟನಾ ಸಂಚಾಲಕ ಎ.ಪಿ. ದೀಪಕ್ ತಿಳಿಸಿದ್ದಾರೆ.

ದಲಿತಪರ ಒಕ್ಕೂಟ: ಮಡಿಕೇರಿ ಯಲ್ಲಿನ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಸೋಮವಾರಪೇಟೆ ತಾಲೂಕು ದಲಿತ ಒಕ್ಕೂಟ ಬೆಂಬಲ ನೀಡಲಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜೆ.ಎಲ್. ಜನಾರ್ಧನ ತಿಳಿಸಿದ್ದಾರೆ.