ಕಣಿವೆ, ನ.22 : ಹಾಸನ - ಮೈಸೂರು ರಾಜ್ಯ ಹೆದ್ದಾರಿಯ ಕುಶಾಲನಗರ ಮಾರುಕಟ್ಟೆ ಬಳಿಯ ರಸ್ತೆಯಂಚಿನಲ್ಲಿ ವಯಸ್ಸಾದ ಕುಟುಂಬ ಒಂದಿದ್ದು, ಸೂರಿಗಾಗಿ ಹಾತೊರೆಯುತ್ತಿದೆ. ಆದರೂ ಸ್ಥಳೀಯ ಪಟ್ಟಣ ಪಂಚಾಯಿತಿಗೆ ಈ ಅಮಾಯಕ, ನತದೃಷ್ಟ ಕುಟುಂಬದ ಅರಿವೇ ಇಲ್ಲದಿರುವದು ವಿಪರ್ಯಾಸವೇ ಸರಿ.

ಅಷ್ಟಕ್ಕೂ ಸೂರಿಲ್ಲದೇ ರಸ್ತೆಯಂಚಿನಲ್ಲಿ ಸಂಕಷ್ಟದ ಸ್ಥಿತಿಯಲ್ಲಿರುವ ವ್ಯಕ್ತಿಯ ಹೆಸರು ಅಬ್ದುಲ್ ಜಬ್ಬಾರ್, ವಯಸ್ಸು 65. ಇವರ ಪತ್ನಿ ಫಾತಿಮಾ ವಯಸ್ಸು 55. ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ಹಿರಿಯ ಮಗಳು ನೂರ್ ನವಾಸ್‍ಗೆ ವಿವಾಹವಾಗಿದೆ. ಎರಡನೇ ಮಗಳು ತುಮಕೂರಿನ ಮದರಸಾ ಒಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆಯ ಖರ್ಚು ವೆಚ್ಚವನ್ನೆಲ್ಲಾ ಮದರಸಾದವರೇ ಭರಿಸುತ್ತಿದ್ದಾರಂತೆ.

ಈ ಅಬ್ದುಲ್ ಜಬ್ಬಾರ್ ಮೂಲತಃ ಚಿಂತಾಮಣಿಯವರು. ಇವರು ಜೀವನವನ್ನು ಅರಸಿ ಕುಶಾಲನಗರಕ್ಕೆ ಬಂದು ಹತ್ತಾರು ವರ್ಷಗಳೇ ಕಳೆದಿವೆ. ಬಂದ ಆರಂಭದಲ್ಲಿ ಮಾರುಕಟ್ಟೆ ರಸ್ತೆಯ ಮಥಾಲಿ ಎಂಬವರ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಚಿಂದಿ ಆಯ್ದು ಮಾರಾಟ ಮಾಡಿ ಬಂದ ಹಣದಲ್ಲಿ ಜೀವನ ನಡೆಸುತ್ತಿದ್ದರು. ಇವರು ಗುಂಡೂರಾವ್ ಬಡಾವಣೆಯಲ್ಲಿನ ನಿರಾಶ್ರಿತರ ಶಿಬಿರದಲ್ಲಿಯೇ ಗುಡಿಸಲೊಂದನ್ನು ನಿರ್ಮಿಸಿ ಕಳೆದ ಏಳೆಂಟು ವರ್ಷಗಳಿಂದ ವಾಸವಿದ್ದರು. ಎಂದಿನಂತೆ ಒಂದು ದಿನ ಬೆಳಗ್ಗೆ ಚಿಂದಿ ಆಯಲು ಗುಡಿಸಲಿಂದ ಹೊರ ಹೋಗಿದ್ದ ಸಂದರ್ಭ ಯಾರೋ ಕಿಡಿಗೇಡಿಗಳು ಇವರ ಗುಡಿಸಲಿಗೆ ಬೆಂಕಿ ಹಾಕಿದ್ದರು. ಆ ಬೆಂಕಿಗೆ ಸಿಲುಕಿ ಅದರೊಳಗಿದ್ದ ಬಟ್ಟೆ -ಬರೆ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ವೋಟಿಂಗ್ ಕಾರ್ಡ್ ಎಲ್ಲವೂ ಸುಟ್ಟು ಹೋದವು. ಈಗ ನನ್ನ ಬಳಿ ಯಾವ ದಾಖಲೆಗಳು ಇಲ್ಲ ಎಂಬುದು ಅಬ್ದುಲ್ ಜಬ್ಬಾರ್ ಅಳಲು. ಪಂಚಾಯಿತಿಗೆ ಮನೆಗೆ ಅಥವಾ ನಿವೇಶನಕ್ಕಾಗಲಿ ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್, ಆಧಾರ್ ಕಾರ್ಡ್ ಯಾವದೂ ಇಲ್ಲ. ಏನು ಮಾಡುವದು. ಹೇಗೆ ಮಾಡಿಸುವದು. ಈ ಹಿಂದೆ ಹತ್ತಾರು ಬಾರಿ ಪಂಚಾಯಿತಿಗೆ ಅರ್ಜಿಗಳನ್ನು ಕೊಟ್ಟು ಸಾಕಾಗಿದೆಯಲ್ಲ ಏನು ಮಾಡೋದು ಹೇಳಿ ಎಂದು ಇವರು ತನ್ನ ಅಸಹಾಯಕತೆ ತೋರ್ಪಡಿಸುತ್ತಾರೆ. ರಸ್ತೆ ಹಾಗೂ ಚರಂಡಿ ಮಧ್ಯೆ ಕೇವಲ ನಾಲ್ಕು ಅಡಿ ಜಾಗದಲ್ಲಿ ಇವರು ಪಾತ್ರೆ, ಹಾಸು ಹೊದಿಕೆ ಇಟ್ಟು ಅಲ್ಲೇ ಅಡುಗೆ ಮಾಡಿಕೊಂಡು ಊಟ ಮಾಡಿ ಸೊಳ್ಳೆ ಕಾಟದಲ್ಲೇ ಮಲಗುತ್ತಾ ಜೀವನ ಸವೆಸುತ್ತಾ ಬರುತ್ತಿದ್ದಾರೆ.

ಈ ಮಧ್ಯೆ ಎಮ್ಮೆಮಾಡುವಿನ ಉರೂಸ್‍ಗೆಂದು ತೆರಳಿದ್ದ ಸಂದರ್ಭ ಬೈಕ್ ಒಂದು ಡಿಕ್ಕಿಯಾಗಿ ಎಡಗಾಲಿನ ಮಂಡಿ ಜಖಂಗೊಂಡಿದ್ದು, ‘ಆಯ್ದುಕೊಂಡು ತಿನ್ನುವ ವ್ಯಕ್ತಿಗೆ ಗಾಯದ ಮೇಲೆ ಬರೆ’ ಎಳೆದಂತಾಗಿದೆ. ಈಗ ಪತ್ನಿಯೇ ಪ್ಲಾಸ್ಟಿಕ್ ಮತ್ತಿತರ ಚಿಂದಿ ಆಯ್ದು ಮಾರಾಟ ಮಾಡಿ ಬಂದ ಹಣದಲ್ಲಿ ಊಟ ಮಾಡುತ್ತಿದ್ದಾರೆ. ಇನ್ನಾದರೂ ಪಂಚಾಯಿತಿ ಆಡಳಿತ, ಸಂಘ- ಸಂಸ್ಥೆಯವರು, ಹೃದಯವಂತರು ಗಮನಿಸಿ ನಿರ್ಗತಿಕ ಮಂದಿಗೆ ಕೊನೆ ಪಕ್ಷ ತಾತ್ಕಾಲಿಕ ಸೂರನ್ನಾದರೂ ಒದಗಿಸಬೇಕಿದೆ. ಈ ಕುಟುಂಬಕ್ಕೆ ಆಸರೆಯಾಗಬೇಕಿದೆ.

-ಕೆ.ಎಸ್. ಮೂರ್ತಿ