ಮಡಿಕೇರಿ, ನ. 22: ಕಾರ್ಯಕ್ರಮ ಅನುಷ್ಠಾನದಲ್ಲಿ ಕೊಡಗು ಜಿಲ್ಲಾ ಘಟಕದ ವೈದ್ಯಕೀಯ ಪ್ರಕೋಷ್ಠ ರಾಜ್ಯದಲ್ಲೇ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು. ಜಿಲ್ಲೆಯಲ್ಲಿ ರೂಪಿಸಿದ ಕಾರ್ಯಕ್ರಮಗಳು ಮೆಚ್ಚುಗೆಗೆ ಪಾತ್ರವಾಗಿವೆ.

ಬಿಜೆಪಿಯ ವಿವಿಧ ಘಟಕಗಳಲ್ಲಿ ವೈದ್ಯಕೀಯ ಪ್ರಕೋಷ್ಠ ಒಂದಾಗಿದ್ದು ಶೋಷಿತರ, ದುರ್ಬಲ, ಸಮಾಜದ ಮುಖ್ಯ ವಾಹಿನಿಗೆ ಬಾರದವರಿಗೆ ವಿವಿಧ ಕಾರ್ಯಕ್ರಮ ರೂಪಿಸುವ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡಿ ರಾಜ್ಯ ಬಿಜೆಪಿಯಲ್ಲಿ ವೈದ್ಯಕೀಯ ಪ್ರಕೋಷ್ಠ ಸಾಧನೆ ಮಾಡಿ ಗುರುತಿಸಿಕೊಂಡಿದೆ.

ಪ್ರಕೋಷ್ಠದಿಂದ ಔಷಧಿ ವ್ಯಾಪಾರಿಗಳೊಂದಿಗೆ ಸಂವಾದ, ಹಾಡಿ, ಮಹಿಳಾ ಸಂಘಟನೆ ಸೇರಿದಂತೆ ವಿವಿಧೆಡೆ ಜನೌಷಧ್ ಉಪಯೋಗದ ಬಗ್ಗೆ ಜಾಗೃತಿ, ಜಿಲ್ಲೆಯ ವಿವಿಧ ಹಾಡಿಗಳಲ್ಲಿ ಆರೋಗ್ಯ ಶಿಬಿರ, ದೇವರಪುರ ಗಿರಿಜನ ಹಾಡಿ, ಗೋಣಿಕೊಪ್ಪ, ತಿತಿಮತಿ, ಸೋಮವಾರಪೇಟೆ ಸೇರಿದಂತೆ ವಿವಿಧೆಡೆ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ, ಜಿಲ್ಲೆಯ ವಿವಿಧೆಡೆ ನೇತ್ರದಾನ, ಅಂಗಾಂಗ ದಾನದ ಕಾರ್ಡ್ ವಿತರಣೆ, ವಿಶೇಷ ಚೇತನರಿಗೆ ಆರೋಗ್ಯ ತಪಾಸಣೆ, ಪಿಂಚಣಿ ಕಾರ್ಡ್ ವಿತರಣೆ, ನೈಜ್ಯ ಫಲಾನುಭವಿಗಳಿಗೆ ಪಿಂಚಣಿ ಅದಾಲತ್, ಶನಿವಾರಸಂತೆ, ಮಾಲಂಬಿ ಸೇರಿದಂತೆ ವಿವಿಧೆಡೆ ಜನ್‍ಧನ್ ಖಾತೆ ತೆರೆಯುವ ಮೂಲಕ ಬ್ಯಾಂಕ್ ವ್ಯವಸ್ಥೆ ಬಗ್ಗೆ ಜಾಗೃತಿ, ಸೋಮವಾರಪೇಟೆ, ವೀರಾಜಪೇಟೆ ಸೇರಿದಂತೆ ನೆರೆಯಿಂದ ಬಾದಿತರಾದ ಉದ್ಯೋಗ ವಂಚಿತರಿಗೆ ಉದ್ಯೋಗ ಮೇಳ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಕೊಡಗು ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಅನುಷ್ಠಾನ ಮಾಡಿ ರಾಜ್ಯಕ್ಕೆ ಮಾದರಿಯಾಗಿದೆ.

ಇದರೊಂದಿಗೆ ಬಿಜೆಪಿ ಪಕ್ಷ ಸಂಘಟನೆ, ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡು ಪಕ್ಷದ ಬಲವರ್ದನೆಗೂ ಪೂರಕ ಸಹಕಾರ ನೀಡಿದ ಬಗ್ಗೆಯೂ ರಾಜ್ಯ ವೈದ್ಯಕೀಯ ಪ್ರಕೋಷ್ಠ ಮೆಚ್ಚುಗೆ ಸೂಚಿಸಿದೆ.

ಡಾ.ನವೀನ್ ಕುಮಾರ್ ಬಿ.ಸಿ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾಧ್ಯಕ್ಷರಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುವ ಗುರಿ ಹೊಂದಲಾಗಿದೆ. ದುರ್ಬಲ, ಶೋಷಿತ ಜನಾಂಗದವರ ಪರ ಕೆಲಸ ಮಾಡಲಾಗುವದು. ಕಾರ್ಯಕ್ರಮ ಅನುಷ್ಠಾನದಲ್ಲಿ ಕೊಡಗು ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ರಾಜ್ಯದಲ್ಲಿ ಗುರುತಿಸಿಕೊಂಡು ಮೊದಲ ಸ್ಥಾನದಲ್ಲಿರುವದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.