ಮಡಿಕೇರಿ, ನ. 21: ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (ಎನ್.ಪಿ.ಸಿ.ಐ) ನ್ಯಾಷನಲ್ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಯೋಜನೆಯಡಿ ಟೋಲ್ ಬೂತ್‍ಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕಾಗಿ ‘ಫಾಸ್ಟ್‍ಟ್ಯಾಗ್’ ಅನ್ನು ಸಿದ್ಧಪಡಿಸಲಾಗಿದ್ದು, ಇವುಗಳನ್ನು ಡಿ.1ರಿಂದ ಕಡ್ಡಾಯವಾಗಿ ವಾಹನಗಳಿಗೆ ಅಳವಡಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್.ಎಫ್.ಐ.ಡಿ.) ತಂತ್ರಜ್ಞಾನವನ್ನು ಬಳಸಿಕೊಂಡು ಈ ‘ಫಾಸ್ಟ್‍ಟ್ಯಾಗ್’ ಕಾರ್ಯ ಮಾಡುತ್ತದೆ. ವಾಹನದ ಮುಂಭಾಗದ ವಿಂಡ್ ಶೀಲ್ಡ್‍ಗೆ ಇದನ್ನು ಅಂಟಿಸಬೇಕಿದೆ. ವಾಹನ ಚಾಲನೆಯಲ್ಲಿ ಇರುವಾಗಲೇ ಟೋಲ್ ಬೂತ್‍ನಲ್ಲಿ ಇರುವ ಯಂತ್ರ ‘ಫಾಸ್ಟ್ ಟ್ಯಾಗ್’ ಅನ್ನು ಸ್ಕ್ಯಾನ್ ಮಾಡಿ ಇದಕ್ಕೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯಿಂದ ಹಣ ಪಾವತಿ ಯಾಗುತ್ತದೆ. ಇದೀಗ ದೇಶಾದ್ಯಂತ 450ಕ್ಕೂ ಅಧಿಕ ಟೋಲ್ ಬೂತ್‍ಗಳಲ್ಲಿ ಈ ತಂತ್ರಜ್ಞಾನವಿದ್ದು, ಡಿ.1ರಿಂದ ರಾಷ್ಟ್ರ ಹೆದ್ದಾರಿಗಳಲ್ಲಿರುವ ಎಲ್ಲಾ ಬೂತ್‍ಗಳಲ್ಲಿ ಈ ತಂತ್ರಜ್ಞಾನ ದಿಂದ ಟೋಲ್ ಸಂಗ್ರಹವಾಗುತ್ತದೆ.

‘ಫಾಸ್ಟ್ ಟ್ಯಾಗ್’ ಖರೀದಿ

‘ಫಾಸ್ಟ್ ಟ್ಯಾಗ್’ ಖರೀದಿಗೆ ಎನ್.ಪಿ.ಸಿ.ಐ ವೆಬ್‍ಸೈಟ್‍ನ ಈ ಲಿಂಕ್ ‘‘biಣ.ಟಥಿ/2oಆgಖಿಊi’’ ಮೂಲಕ ನಿಮ್ಮ ಹೆಸರು, ಬ್ಯಾಂಕ್ ಹೆಸರು, (ಮೊದಲ ಪುಟದಿಂದ) ಮೊಬೈಲ್ ನಂಬರ್, ವಾಹನದ ಮಾಹಿತಿ ಹಾಗೂ ಇನ್ನಿತರ ಮಾಹಿತಿಗಳನ್ನು ನೀಡುವದರ ಮೂಲಕ ಕೋರಿಕೆ ಸಲ್ಲಿಸಬೇಕಿದೆ. ‘ಫಾಸ್ಟ್ ಟ್ಯಾಗ್’ ಎಂಬ ಮೊಬೈಲ್ ಆ್ಯಪ್ ಅನ್ನು ಬಳಸಿ ಕೂಡ ಟ್ಯಾಗ್ ಅನ್ನು ಅಮೆಜಾನ್ ಮೂಲಕ ಖರೀದಿ ಅಥವಾ ಖರೀದಿ ಮಾಡಿದ ಟ್ಯಾಗ್ ಅನ್ನು ಸಕ್ರಿಯಗೊಳಿಸಬಹುದಾಗಿದೆ.

‘ಫಾಸ್ಟ್ ಟ್ಯಾಗ್’ ಅನ್ನು ವಿವಿಧ ಬ್ಯಾಂಕ್‍ಗಳಲ್ಲಿ, ಟೋಲ್ ಫ್ಲಾಜಾಗಳಲ್ಲಿ ಹಲವು ದಾಖಲಾತಿಗಳನ್ನು ನೀಡಿ ಪಡೆಯಬಹುದಾಗಿದೆ.

‘ಫಾಸ್ಟ್ ಟ್ಯಾಗ್’ 2 ವಿಧಗಳದ್ದಾಗಿದ್ದು, ಬ್ಯಾಂಕಿನಿಂದ ಪಡೆದ ಟ್ಯಾಗ್ ಬ್ಯಾಂಕಿನ ಪ್ರೀ-ಪೇಯ್ಡ್ ವಾಲೆಟ್‍ಗೆ ಲಿಂಕ್ ಆಗಿದ್ದು, ಇದನ್ನು ಪಡೆಯಲು ಕೆ.ವೈ.ಸಿ. (ನಿಮ್ಮ ಗ್ರಾಹಕರನ್ನು ಅರಿಯಿರಿ) ದಾಖಲಾತಿಗಳೊಂದಿಗೆ ವಾಹನದ ನೋಂದಣಿ ಪತ್ರ, ವಾಹನದ ಮಾಲೀಕನ ಛಾಯಾಚಿತ್ರ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದ ಯಾವದಾದರೊಂದು ವಿಳಾಸ ಸಹಿತ ಗುರುತಿನ ಚೀಟಿಗಳ ಪ್ರತಿಗಳನ್ನು ನೀಡಬೇಕಿದೆ.

ಇನ್ನೊಂದು ವಿಧದ ಟ್ಯಾಗ್ ಬ್ಯಾಂಕಿಗೆ ಲಿಂಕ್ ಆಗಿರುವದಿಲ್ಲ. ಇದನ್ನು ‘ಫಾಸ್ಟ್ ಟ್ಯಾಗ್’ ಆ್ಯಪ್ ಮೂಲಕ ಯು.ಪಿ.ಐ, ನೆಟ್ ಬ್ಯಾಂಕಿಂಗ್ ಹಾಗೂ ಇತರ ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಬಳಸಿ ರೀಚಾರ್ಜ್ ಮಾಡಬಹುದಾಗಿದೆ.

ಟ್ಯಾಗ್‍ನ ದರ ರೂ. 100 ಆಗಿದ್ದು, ಇದರೊಂದಿಗೆ ಭದ್ರತಾ ಶುಲ್ಕವಾಗಿ ಹೆಚ್ಚುವರಿ ಹಣ ಪಾವತಿಸಬೇಕಾಗಿದ್ದು, ವಾಹನದ ಮಾದರಿಯ ಮೇಲೆ ಅವಲಂಬಿತವಾಗಿದೆ. ಡಿಸೆಂಬರ್ 1ರಿಂದ ರಾಷ್ಟ್ರದ ಎಲ್ಲಾ ಟೋಲ್ ಬೂತ್‍ಗಳಲ್ಲಿ ಈ ಮಾದರಿಯ ಟೋಲ್ ಸಂಗ್ರಹ ಕಡ್ಡಾಯಗೊಳ್ಳಲಿದೆ. ಪ್ರತಿ ಟೋಲ್ ಬೂತ್‍ಗಳಲ್ಲಿ 1 ದ್ವಾರವನ್ನು ಬಿಟ್ಟು ಉಳಿದೆಲ್ಲಾ ದ್ವಾರಗಳು ‘ಫಾಸ್ಟ್ ಟ್ಯಾಗ್’ ದ್ವಾರಗಳಾಗಿರುತ್ತವೆ. ‘ಫಾಸ್ಟ್ ಟ್ಯಾಗ್’ ಇಲ್ಲದೆ ಇದ್ದರೆ ಈ ದ್ವಾರವನ್ನು ಬಳಸಿ ದುಪ್ಪಟ್ಟು ಹಣ ದಂಡ ವಿಧಿಸಬೇಕಿದೆ.