ಕೂಡಿಗೆ, ನ. 21: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುದುಗೂರು ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಆ ಪ್ರದೇಶದ ಸುಮಾರು 10 ಕ್ಕೂ ಹೆಚ್ಚು ಎಕರೆಯಷ್ಟು ಪ್ರದೇಶದಲ್ಲಿ ಕೊಯ್ಲಿಗೆ ಬಂದಿರುವ ಭತ್ತದ ಬೆಳೆಯನ್ನು ನಷ್ಟಪಡಿಸಿವೆ.

ಕುಶಾಲನಗರ ಅರಣ್ಯ ವಲಯಕ್ಕೆ ಸೇರಿದ ಬೆಂಡೆಬೆಟ್ಟ ಅರಣ್ಯ ಪ್ರದೇಶದಿಂದ ಹಾರಂಗಿ ನದಿಯನ್ನು ದಾಟಿ 10 ಕ್ಕೂ ಹೆಚ್ಚು ಕಾಡಾನೆ ಹಿಂಡು ಈ ವ್ಯಾಪ್ತಿಯ ಜಮೀನುಗಳಿಗೆ ನುಗ್ಗಿ ಭತ್ತದ ಬೆಳೆಯನ್ನು ಹಾಳು ಮಾಡಿವೆ. ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆಯನ್ನು ಕಾಡಾನೆಗಳು ನಾಶ ಮಾಡಿರುವದರಿಂದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ರೈತರಾದ ಅಚ್ಚಯ್ಯ, ಸಣ್ಣಪ್ಪ, ಜವರೇಗೌಡ, ಬಸಪ್ಪ, ಚಿನ್ನಣ್ಣ ಸೇರಿದಂತೆ 25 ಕ್ಕೂ ಹೆಚ್ಚು ರೈತರ ಭತ್ತದ ಬೆಳೆ ಮಾತ್ರವಲ್ಲದೆ, ಕೇನೆ, ಕೆಸ, ಶುಂಠಿ, ತೆಂಗು, ಬಾಳೆ, ಅಡಿಕೆ ಬೆಳೆಗಳನ್ನು ಕೂಡ ನಾಶಪಡಿಸಿವೆ.

ಹಲವಾರು ಭಾರಿ ಅರಣ್ಯ ಇಲಾಖೆಯವರಿಗೆ ಕಾಡಾನೆ ಹಾವಳಿಯನ್ನು ನಿಯಂತ್ರಿಸುವಂತೆ ರೈತರು, ಗ್ರಾಮಸ್ಥರು ಮನವಿ ಮಾಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಒಂದು ಬದಿಯಲ್ಲಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಕಾಯುತ್ತಿದ್ದರೆ, ಕಾಡಾನೆ ಹಿಂಡೇಮತ್ತೊಂದು ಕಡೆಯಿಂದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕಣ್ತಪ್ಪಿಸಿ ಗ್ರಾಮಗಳತ್ತ ಬರುತ್ತಿವೆ.

ಕಾಡಾನೆಗಳು ಬೆಳೆಯನ್ನು ನಾಶಪಡಿಸಿರುವ ಸ್ಥಳಕ್ಕೆ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶಮ, ಹುದುಗೂರು ವಲಯ ಅರಣ್ಯಾಧಿಕಾರಿ ಸತೀಶ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ, ಪರಿಶೀಲಿಸಿದರು.