ಶನಿವಾರಸಂತೆ, ನ. 21: ಪಟ್ಟಣದ ಶ್ರೀ ಬೀರಲಿಂಗೇಶ್ವರ, ಶ್ರೀ ಪ್ರಬಲಭೈರವಿ ಹಾಗೂ ಶ್ರೀ ಪರಿವಾರ ದೇವರುಗಳ ಪ್ರಥಮ ವಾರ್ಷಿಕ ಮಹೋತ್ಸವದ ಕಾರ್ತಿಕ ಮಾಸದ ಮೊದಲ ದಿನದ ಪೂಜಾ ಕಾರ್ಯಕ್ರಮ ನೆರವೇರಿತು.

ಬೆಳಿಗ್ಗೆ 9 ಗಂಟೆಯಿಂದ ಪರಿವಾರ ದೇವತೆಗಳ ಪೂಜಾ ಕಾರ್ಯಕ್ರಮ ಆರಂಭವಾಯಿತು. ಮಧ್ಯಪೇಟೆಯ ಶ್ರೀ ಗಣಪತಿ-ಪಾರ್ವತಿ-ಚಂದ್ರಮೌಳೇಶ್ವರ ದೇವಾಲಯದಲ್ಲಿ ಸರ್ವಧರ್ಮ ದವರಿಂದ ಪ್ರಾರ್ಥನೆ ಮತ್ತು ಮಂಗಳಾರತಿ ನಡೆಯಿತು. ನಂತರ ಬಿದರೂರು ಗ್ರಾಮದ ಊರೊಡೆಯ ದೇವರು, ಬ್ರಹ್ಮದೇವರು, ಬಸವೇಶ್ವರ ದೇವರು, ಹೆಮ್ಮನೆ ಗ್ರಾಮದ ಮಾರಿಯಮ್ಮ ದೇವರು, ಬಸವೇಶ್ವರ ದೇವರು, ತ್ಯಾಗರಾಜ ಕಾಲೋನಿಯ ಶ್ರೀ ವಿಜಯ ವಿನಾಯಕ ದೇವರು, ಶ್ರೀ ಚಾಮುಂಡೇಶ್ವರಿ ದೇವಿ, ಶ್ರೀ ರಾಮ ಮಂದಿರದ ರಾಮದೇವರಿಗೆ ಮಹಾಪೂಜೆ ನೆರವೇರಿಸಲಾಯಿತು.

ಪಟ್ಟಣದ ಜಾಮೀಯ ಮಸೀದಿಯಲ್ಲಿ ಮುಸ್ಲಿಂ ಸಮುದಾಯದವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಧರ್ಮ ಗುರುವಿನ ಧರ್ಮೋಪದೇಶ ನಡೆಯಿತು. ಹಿಂದೂ ಸಮುದಾ ಯದವರಿಗೆ ಪಾನೀಯ ವಿತರಿಸಿದರು. ಅಂತಿಮವಾಗಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಪೂಜೆ, ಮಂಗಳಾರತಿ ನಡೆಯಿತು. ಪ್ರಸಾದ ವಿನಿಯೋಗವಾಯಿತು. ಅರ್ಚಕರಾದ ಮಾಲತೇಶ್ ಭಟ್, ಶೇಷಾಚಲ ಭಟ್ ಹಾಗೂ ತಂಡದವರು ಪೂಜಾ ವಿಧಿ ನೆರವೇರಿಸಿದರು. ಶನಿವಾರಸಂತೆ ಪಟ್ಟಣ ಸುತ್ತಮುತ್ತಲ ಗ್ರಾಮಗಳ ಭಕ್ತರು ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಶ್ರೀ ಬೀರಲಿಂಗೇಶ್ವರ, ಶ್ರೀ ಪ್ರಬಲಭೈರವಿ ದೇವಸ್ಥಾನ ಸಮಿತಿ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

ವಾರ್ಷಿಕೋತ್ಸವದ 2ನೇ ದಿನ ಬೆಳಿಗ್ಗೆ ಗೋ ಪೂಜೆ, ಗಂಗೆ ಪೂಜೆ ಮಾಡಿದ ಮಹಿಳೆಯರು ಕಲಶ ಹೊತ್ತು ದೇವಸ್ಥಾನದವರೆಗೆ ಮೆರವಣಿಗೆ ನಡೆಸಿದರು. ನಂತರ ದೇವರುಗಳಿಗೆ ಫಲ-ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಗಣಪತಿ ಹೋಮ, ಮಹಾಮೃತ್ಯುಂಜಯ ಹೋಮ, ದುರ್ಗಾ ಹೋಮ, ಪೂರ್ಣಾಹುತಿ ಯೊಂದಿಗೆ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ವಾಯಿತು. ಸಂಜೆ ಶ್ರೀ ಬೀರಲಿಂಗೇಶ್ವರ ದೇವರಿಗೆ ಬಿಲ್ವಾರ್ಚನೆ, ಪ್ರಬಲ ಭೈರವಿ ದೇವಿಗೆ ಹರಿದ್ರಾ ಅರ್ಚನೆ, ವಿವಿಧ ಆರತಿಗಳು ಹಾಗೂ ಮಹಾ ಮಂಗಳಾರತಿ ನೆರವೇರಿತು. ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಸರ್ವ ಧರ್ಮಗಳ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಅರ್ಚಕರಾದ ಶೇಷಾಚಲ ಭಟ್, ಮಾಲತೇಶ್ ಭಟ್ ಮತ್ತು ತಂಡದವರು ಪೂಜಾ ಕೈಂಕರ್ಯ ನೆರವೇರಿಸಿದರು. ಶ್ರೀ ಬೀರಲಿಂಗೇಶ್ವರ ಪ್ರಬಲ ಭೈರವಿ ದೇವಿ ಮತ್ತು ಪರಿಹಾರ ದೇವರುಗಳ ಸಮಿತಿ ಆಡಳಿತ ಮಂಡಳಿ ಸದಸ್ಯರು, ಗ್ರಾಮದ ಮುಖಂಡರು, ಗ್ರಾಮಸ್ಥರು ಪೂಜಾ ಸಂದರ್ಭ ಹಾಜರಿದ್ದರು.