*ಗೋಣಿಕೊಪ್ಪಲು, ನ. 21: ಕಾನೂರು ಗ್ರಾ.ಪಂ. ಸದಸ್ಯ ಅಕ್ರಮವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜೆ.ಸಿ.ಬಿ ಯಂತ್ರದ ಮೂಲಕ ಮಣ್ಣು ತೆಗೆದು ರಸ್ತೆಯ ಎರಡು ಬದಿಗಳಿಗೆ ಹಾಕುವ ಮೂಲಕ 14ನೇ ಹಣಕಾಸು ಯೋಜನೆಯ ಕಾಮಗಾರಿಗೆ ರೂ. 65 ಸಾವಿರ ಹಣ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಗ್ರಾಮಸ್ಥರು ಪಂಚಾಯಿತಿ ಸದಸ್ಯ ಸಿದ್ದುನಾಚಪ್ಪ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಈ ವಿಚಾರವಾಗಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗೆ ಸ್ಥಳೀಯ ಗ್ರಾಮಸ್ಥರಾದ ಜಿ.ಎಸ್. ತಮ್ಮಯ್ಯ, ವಿ.ವಿ. ರಘು, ಎಂ.ಎನ್. ಪೆÇನ್ನಪ್ಪ ಮತ್ತು ಮಂಜು ಅವರುಗಳು ದೂರು ಸಲ್ಲಿಸಿದ್ದು, ಸದಸ್ಯರ ಈ ನಡೆಯನ್ನು ವಿರೋಧಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಲು ಸುಮಾರು 100 ಟ್ರಾಕ್ಟರ್‍ಗೂ ಹೆಚ್ಚು ಮಣ್ಣನ್ನು ಆಸ್ಪತ್ರೆಯ ಆವರಣದಿಂದ ಹೊರಸಾಗಿಸಿ ರಸ್ತೆಯ ಎರಡು ಬದಿಗಳಿಗೆ ಹಾಕಿ ಪಂಚಾಯಿತಿಯಿಂದ ಹಣ ಪಡೆಯಲು ಸಂಚು ರೂಪಿಸಿದ್ದಾರೆ ಎಂದು ಜಿ.ಎಸ್. ತಮ್ಮಯ್ಯ ಆರೋಪಿಸಿದ್ದಾರೆ. ಆರೋಗ್ಯ ಕೇಂದ್ರದಲ್ಲಿದ್ದ ಬೃಹತ್ ಗಾತ್ರದ ಮರಗಳ ಬುಡ ಸಮೇತ ಮಣ್ಣು ತೆಗೆಯಲಾಗಿದೆ. ಅಲ್ಲದೇ ಕಟ್ಟಡದ ಅಡಿಪಾಯದವರೆಗೂ ಮಣ್ಣು ತೆಗೆದು ಕೆರೆಯ ಆಕಾರದಲ್ಲಿ ಹೊಂಡ ಮಾಡಲಾಗಿದೆ. ಮುಂದಿನ ಮಳೆ ಸಂದರ್ಭ ಕಟ್ಟಡಗಳು ಮತ್ತು ಮರಗಳು ಉರುಳಿ ಬೀಳುವ ಆತಂಕವು ಈ ಆವೈಜ್ಞಾನಿಕ ಕ್ರಿಯೆಯಿಂದ ಆಗಿದೆ. ಇತ್ತೀಚೆಗಷ್ಟೆ 1 ಕೋಟಿ, ಹತ್ತು ಲಕ್ಷ ವೆಚ್ಚದಲ್ಲಿ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣವಾಗಿದೆ. ಇವರ ಈ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಆರೋಗ್ಯ ಕೇಂದ್ರದಿಂದ ಉಂಟಾಗುವ ಸೇವೆಯು ಸಿಗದಂತಾಗುತ್ತದೆ ಎಂದು ಗ್ರಾಮಸ್ಥ ಜಿ.ಎಸ್. ತಮ್ಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೂ, ಅಧ್ಯಕ್ಷರಿಗೂ ಮಾಹಿತಿ ಇಲ್ಲದೇ ಈ ರೀತಿಯ ಅವ್ಯವಸ್ಥೆಗೆ ಮುಂದಾಗಿರುವದರ ವಿರುದ್ಧ ಕಿಡಿಕಾರಿದ ಗ್ರಾಮಸ್ಥರು; ಸ್ಥಳೀಯ ಪಂಚಾಯಿತಿ ಸದಸ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರ ಖಾಸಗಿ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ವಿಚಾರವಾಗಿ ಖಾಸಗಿ ಮುಖ್ಯಸ್ಥರೊಂದಿಗೆ ಪ್ರಸ್ತಾಪಿಸಿದಾಗ ಮಣ್ಣನ್ನು ಹೊರಸಾಗಿಸಲು ಅನುಮತಿ ನೀಡಿರಲಿಲ್ಲ. ಆದರೆ ಆರೋಗ್ಯ ಕೇಂದ್ರ ಸುತ್ತಲಿನ ಆವರಣವನ್ನು ಸ್ವಚ್ಛವಾಗಿಡಲು ಮತ್ತು ವೈದ್ಯಾಧಿಕಾರಿಯ ವಿಶ್ರಾಂತಿ ಗೃಹಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಹÀಳ್ಳ ದಿಣ್ಣೆಗಳನ್ನು ಸಮತಟ್ಟು ಮಾಡಲು ಈ ಹಿಂದೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಮಣ್ಣನ್ನು ಆವರಣದಿಂದ ಹೊರಸಾಗಿಸಲು ತೀರ್ಮಾನಿಸಲಾಗಿರಲಿಲ್ಲ. ಆದರೆ ಸದಸ್ಯ ಸಿದ್ದುನಾಚಪ್ಪ ಸಭೆಯ ನಿಯಮವನ್ನು ಮೀರಿ ಮಣ್ಣನ್ನು ಹೊರಸಾಗಿಸಿದ್ದಾರೆ. ಈ ಮೂಲಕ ಪಂಚಾಯಿತಿಯಲ್ಲಿ ಬಿಲ್ ಮಾಡಿ ಹಣ ಪಡೆಯುವ ಉದ್ದೇಶ ಹೊಂದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಸದಸ್ಯರ ಈ ಅವೈಜ್ಞಾನಿಕ ಕಾರ್ಯ ಸ್ಥಳೀಯ ಪಂಚಾಯಿತಿಗೆ ತಾಲೂಕು ವೈದ್ಯಾಧಿಕಾರಿಗಳಿಗೆ ಮಾಹಿತಿ ಇಲ್ಲ. ಭಾನುವಾರ ದಿವಸ ಯಾರೂ ಇಲ್ಲದ ಸಮಯವನ್ನೇ ಗುರಿಯಾಗಿಸಿಕೊಂಡು ತಮ್ಮ ಕಾರ್ಯ ಸಾಧನೆಗೆ ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸರ್ವಾಧಿಕಾರ ದೋರಣೆ ಯೊಂದಿಗೆ ಅನ್ಯ ಮಾರ್ಗದಲ್ಲಿ ಪಂಚಾಯಿತಿ ಹಣ ಲಪಾಟಾಯಿಸಲು ಮುಂದಾಗಿರುವ ಗ್ರಾ.ಪಂ. ಸದಸ್ಯನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಶೀಘ್ರವೇ ಕ್ರಮಕ್ಕೆ ಮುಂದಾಗದಿದ್ದಲ್ಲಿ ಹೋರಾಟದ ಮಾರ್ಗ ಹಿಡಿಯಲಾಗುವದು ಎಂದು ಎಚ್ಚರಿಕೆ ನೀಡಿದ್ದಾರೆ.