ಮಡಿಕೇರಿ, ನ. 20 : ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿರುವ ಕೊಡಗಿನ “ಹೋಂ ಮೇಡ್ ವೈನ್” ನ ಗುಣಮಟ್ಟ ಮತ್ತು ರುಚಿಯನ್ನು ಕಾಯ್ದುಕೊಳ್ಳುವಂತೆ ಹೋಂ ಮೇಡ್ ವೈನ್ ತಯಾರಕರ ಮತ್ತು ಮಾರಾಟಗಾರರ ಸಂಘದ ಜಿಲ್ಲಾ ಘಟಕ ಮನವಿ ಮಾಡಿದೆ.

ಸಂಘದ ಪದಾಧಿಕಾರಿಗಳು ಇಂದು ಪ್ರವಾಸಿತಾಣ ದುಬಾರೆ ವ್ಯಾಪ್ತಿಯ ವಿವಿಧ ವೈನ್ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಕಳಪೆ ಗುಣಮಟ್ಟದ ವೈನ್ ಮಾರಾಟ ವಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿರುವ ಬಗ್ಗೆ ಮಳಿಗೆ ಮಾಲೀಕರ ಗಮನ ಸೆಳೆದರು. ಅನಾರೋಗ್ಯಕರ ಪೈಪೋಟಿಗಾಗಿ ದರ ಸಮರ ನಡೆಸುತ್ತಿದ್ದು, ಈ ಬೆಳವಣಿಗೆಯಿಂದ ವೈನ್ ವ್ಯವಹಾರ ಕ್ಷೇತ್ರಕ್ಕೆ ನಷ್ಟವಾಗಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷೆ ಮಿಲನ್ ಮುತ್ತಣ್ಣ ತಿಳಿಸಿದರು.

ಕೊಡಗಿನ ಪ್ರಕೃತಿ ಸೌಂದರ್ಯ ಸವಿಯುವದಕ್ಕಾಗಿ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಬಹುತೇಕರು ಕೊಡಗಿನ ಮನೆಗಳಲ್ಲೇ ತಯಾರಾಗುವ ವೈನ್‍ಗಳನ್ನು ಕೊಂಡುಕೊಳ್ಳುತ್ತಾರೆ. ಗುಣಮಟ್ಟ ಮತ್ತು ರುಚಿಯಿಂದಲೇ ಹೋಂಮೇಡ್ ವೈನ್ ದೇಶ, ವಿದೇಶದ ಗಮನ ಸೆಳೆದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕರ ಪೈಪೋಟಿ ಕಂಡು ಬರುತ್ತಿದ್ದು, ಕಳಪೆ ಗುಣಮಟ್ಟದ ವೈನ್ ತಯಾರಾಗುತ್ತಿರುವ ಬಗ್ಗೆ ಸಂಘಕ್ಕೆ ದೂರುಗಳು ಕೇಳಿ ಬಂದಿವೆ ಎಂದು ಮಿಲನ್ ಮುತ್ತಣ್ಣ ಹೇಳಿದರು.

ವೈನ್ ಮಾರಾಟಗಾರರು ನಿಯಮ ಉಲ್ಲಂಘಿಸದೆ ಆಹಾರ ಸುರಕ್ಷತಾ ನಿಯಮಗಳಡಿಯೇ ವೈನ್‍ಗಳನ್ನು ಖರೀದಿಸಿ ಮಾರಾಟ ಮಾಡಬೇಕು. ತಯಾರಕರು ಕೂಡ ಇದೇ ನಿಯಮದಡಿ ವೈನ್ ಬಾಟಲಿಗಳ ಮೇಲೆ ಅಗತ್ಯ ಮಾಹಿತಿ ಮತ್ತು ದರ ಪಟ್ಟಿಯನ್ನು ಅಳವಡಿಸಬೇಕೆಂದು ಅವರು ಸಲಹೆ ನೀಡಿದರು.

ಕಳಪೆ ಗುಣಮಟ್ಟದ ವೈನ್ ತಯಾರಿಸುವ ಅಥವಾ ಮಾರಾಟ ಮಾಡುವ ಸದಸ್ಯರು ಕಂಡು ಬಂದಲ್ಲಿ ಸದಸ್ಯತ್ವ ರದ್ದುಗೊಳಿಸುವದಾಗಿ ಮಿಲನ್ ಮುತ್ತಣ್ಣ ಎಚ್ಚರಿಸಿದರು. ಉಪಾಧ್ಯಕ್ಷೆ ಕೆ.ಯು.ಪೂವಮ್ಮ, ಕಾರ್ಯದರ್ಶಿ ಟಿ.ಕೆ.ಸುಮೇಶ್, ನಿರ್ದೇಶಕರುಗಳಾದ ಸೂರಜ್ ಹೊಸೂರು, ಜ್ಯೋತಿ, ಲತಾ ಮತ್ತಿತರರು ದುಬಾರೆ ಭೇಟಿ ಸಂದರ್ಭ ಹಾಜರಿದ್ದರು.