ಮಡಿಕೇರಿ, ನ. 20: ಮಡಿಕೇರಿಯ ಗಣಪತಿ ಕೊಡವಕೇರಿಯ 21ನೇ ವರ್ಷದ ಸಂತೋಷಕೂಟ ಕಾರ್ಯಕ್ರಮ ಇತ್ತೀಚೆಗೆ ನಗರದ ಹೊರವಲಯದಲ್ಲಿರುವ ಕ್ಯಾಪಿಟಲ್ ವಿಲೇಜ್‍ನಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಚೆರುಮಂದಂಡ ಮಣಿ ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವದು ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಸಂಘದ ಕಾರ್ಯಚಟುವಟಿಕೆ ಹಾಗೂ ಮುಂದಿನ ಹೆಜ್ಜೆಗಳ ಕುರಿತು ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಯಿತು.
ಕುಲದೇವರ ಸ್ಮರಣೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ನೀಲಮ್ಮ ಪ್ರಾರ್ಥಿಸಿದರು. ಕಾರ್ಯದರ್ಶಿ ಚೆಂಬಾಂಡ ಮುತ್ತಪ್ಪ ವರದಿ ಮಂಡಿಸಿದರು. ಅಧ್ಯಕ್ಷ ಮಣಿ ಪೊನ್ನಪ್ಪ ಅವರು ನೂತನ ಸದಸ್ಯರನ್ನು ಸಭೆಗೆ ಪರಿಚಯಿಸಿದರು.
ಈ ಸಂದರ್ಭ ಕೆ.ಎ.ಎಸ್. ಅಧಿಕಾರಿಯಾಗಿ ಆಯ್ಕೆಗೊಂಡಿರುವ ಕಲ್ಲೇಂಗಡ ಬಬಿನ್ ಬೋಪಣ್ಣ, ನಾಟ್ಯೊರೋಪತಿ ಮತ್ತು ಯೋಗಿಕ್ ಸೈನ್ಸ್‍ನಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದಿರುವ ಕೋಡಿರ ಡಾ. ಮೌಲ್ಯ ಅಪ್ಪಣ್ಣ, ಇಂಜಿನಿಯರಿಂಗ್‍ನಲ್ಲಿ ಉನ್ನತ ಶ್ರೇಣಿಯೊಂದಿಗೆ ಚಿನ್ನದ ಪದಕ ಗಳಿಸಿರುವ ಕುಕ್ಕೆರ ಶಾಯರಿ ಅಯ್ಯಪ್ಪ ಅವರುಗಳನ್ನು ಸನ್ಮಾನಿಸಲಾಯಿತು. ನಿರ್ದೇಶಕ ಕುಕ್ಕೆರ ಅಶೋಕ್ ಅಯ್ಯಪ್ಪ ವಂದಿಸಿದರು.