ಸಿದ್ದಾಪುರ, ನ.20: ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕಬ್ಬಿಣದ ಏಣಿಗೆ ವಿದ್ಯುತ್ ತಂತಿ ತಗುಲಿ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ನೆಲ್ಯಹುದಿಕೇರಿಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಗ್ರಾಮದ ಕೆ.ಎಂ ಪ್ರಕಾಶ್ ಎಂಬವರ ಅತ್ತಿಮಂಗಲ ಎಸ್ಟೇಟ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಾಜನ್ (45) ಎಂಬವರೆ ಸಾವನ್ನಪ್ಪಿದ ದುರ್ದೈವಿ.
ನಲ್ವತೇಕ್ರೆಯ ಬರಡಿ ಗ್ರಾಮದ ಕಾರ್ಮಿಕ ರಾಜನ್ ಎಂದಿನಂತೆ ತನ್ನ ಮನೆಯಿಂದ ಸ್ಕೂಟಿಯಲ್ಲಿ ನೆಲ್ಯಹುದಿಕೇರಿಯ ಅತ್ತಿಮಂಗಲ ಎಸ್ಟೇಟ್ಗೆ ತೆರಳಿ, ತೋಟದಲ್ಲಿ ಕೆಲಸ ನಿರ್ವಹಿಸುವ ಸಂದರ್ಭ ಕಬ್ಬಿಣದ ಏಣಿಗೆ 11 ಕೆ.ವಿ ವಿದ್ಯುತ್ ತಂತಿ ಸ್ಪರ್ಶವಾಗಿದೆ. ಕೂಡಲೇ ಪಕ್ಕದ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಸ್ಥಳಕ್ಕಾಗಮಿಸಿ ಜೀವ ರಕ್ಷಣೆಗೆ ಮುಂದಾದರಾದರೂ ಫಲಕಾರಿಯಾಗಲಿಲ್ಲ.
ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಬೋಜಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿದರು. ಸೌಮ್ಯ ಸ್ವಭಾವದ ರಾಜನ್ ಹಲವು ಜನಪರವಾದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು.
-ವಾಸು