ನಾಪೋಕ್ಲು, ನ. 20: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿಗೆ ಸಿಲುಕಿ ವೃದ್ದೆಯೊಬ್ಬರು ಮೃತಪಟ್ಟ ಘಟನೆ ಸಮೀಪದ ಬಲ್ಲಮಾವಟಿ ಗ್ರಾಮದಲ್ಲಿ ಜರುಗಿದೆ. ಮಾದೆಯಂಡ ದೇಚವ್ವ (84) ಎಂಬವರು ಮೃತ ದುರ್ದೈವಿ. ಬುಧವಾರ ಮಧ್ಯಾಹ್ನ ಬಲ್ಲಮಾವಟಿ ಗ್ರಾಮದಲ್ಲಿ ಬಸ್ ಹತ್ತಲು ಬಂದ ಮಾದೆಯಂಡ ದೇಚವ್ವ ಆಕಸ್ಮಿಕವಾಗಿ ಬಸ್ನ ಚಕ್ರದಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ.ಭಾಗಮಂಡಲದಿಂದ ಮೈಸೂರಿಗೆ ತೆರಳುತ್ತಿದ್ದ ಬಸ್ (ಕೆಎ 09 ಎ 5180) ಬಸ್ಗೆ ವೃದ್ಧೆ ದೇಚವ್ವ ಏರುವ ಸಂದರ್ಭ ಅವಘಡ ಸಂಭವಿಸಿತ್ತು ಎನ್ನಲಾಗಿದೆ. ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೃತರು ನಿವೃತ್ತ ಶಿಕ್ಷಕ ದಿ. ತಮ್ಮಯ್ಯ ಅವರ ಪತ್ನಿಯಾಗಿದ್ದು, ಪುತ್ರ ಶಂಭು ಅವರ ಮನೆಯಲ್ಲಿ ವಾಸವಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ನಡೆಸಲಾಯಿತು.