ಗೋಣಿಕೊಪ್ಪಲು, ನ.21: ದ.ಕೊಡಗಿನ ಬಾಳೆಲೆ, ಶ್ರೀಮಂಗಲ, ಪೊನ್ನಂಪೇಟೆ, ಹುದಿಕೇರಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕುಟ್ಟ, ಬಿರುನಾಣಿ, ಪರಕಟಗೇರಿ, ಕುರ್ಚಿ, ಶ್ರೀಮಂಗಲ, ಬಾಳೆಲೆ, ಕಾರ್ಮಾಡು, ನಿಟ್ಟೂರು, ಪೊನ್ನಪ್ಪ ಸಂತೆ, ಗೋಣಿಕೊಪ್ಪ, ಹಾತೂರು, ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ವಾಸವಿರುವ ರೈತರು, ಕಾಫಿ ಬೆಳೆಗಾರರು, ಉದ್ಯಮಿಗಳು ಸೇರಿದಂತೆ ಜನ ಚೆಸ್ಕಾಂಗೆ ಕಟ್ಟಬೇಕಾದ ವಿದ್ಯುತ್ ಬಿಲ್ಲ್ ಅನ್ನು ಬಾಕಿ ಉಳಿಸಿಕೊಂಡಿದ್ದು ಗೋಣಿಕೊಪ್ಪ ಚೆಸ್ಕಾಂ ವಲಯಕ್ಕೆ ಸೇರ್ಪಡೆಗೊಂಡಿರುವ ಬಾಳೆಲೆ, ಪೊನ್ನಂಪೇಟೆ, ಶ್ರೀಮಂಗಲ ಹಾಗೂ ಗೋಣಿಕೊಪ್ಪ ವಲಯಗಳಲ್ಲಿ 12 ಕೋಟಿ ಹಣ ಚೆಸ್ಕಾಂ ಇಲಾಖೆಗೆ ಪಾವತಿಸಬೇಕಿದೆ.
ಈ ಭಾಗದಲ್ಲಿ ಅತಿವೃಷ್ಠಿಯಿಂದ ತೊಂದರೆಯಾದರೂ ಇದನ್ನು ಗಣನೆಗೆ ತೆಗೆದುಕೊಳ್ಳದ ಚೆಸ್ಕಾಂನ ಹಿರಿಯ ಅಧಿಕಾರಿಗಳು ಹಣ ವಸೂಲಿ ಮಾಡಿ ಇಲಾಖೆಗೆ ಸಂದಾಯ ಮಾಡುವಂತೆ ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಿರಂತರ ಒತ್ತಡ ಹೇರುತ್ತಿದ್ದಾರೆ. ಹಿರಿಯ ಅಧಿಕಾರಿಗಳ ಆದೇಶ ಪಾಲನೆ ಮಾಡಬೇಕಾದ ಅನಿವಾರ್ಯತೆಯಲ್ಲಿ ಕಿರಿಯ ಸಿಬ್ಬಂದಿ ಸಿಲುಕಿಕೊಂಡಿದ್ದು ಪೀಕಲಾಟ ಅನುಭವಿಸುತ್ತಿದ್ದಾರೆ.
4 ಚೆಸ್ಕಾಂ ವಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲೈನ್ ಮ್ಯಾನ್ಗಳು ಮುಂಜಾನೆಯೇ ವಿದ್ಯುತ್ ಗ್ರಾಹಕರ ಮನೆಗಳಿಗೆ ತೆರಳಿ ಹಿರಿಯ ಅಧಿಕಾರಿಗಳ ಆದೇಶದಂತೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್ ಲೈನ್ಅನ್ನು ಕಟ್ ಮಾಡುತ್ತಿದ್ದಾರೆ. ಈ ಸಂದರ್ಭ ಲೈನ್ಮ್ಯಾನ್ ಹಾಗೂ ಗ್ರಾಹಕರ ಮಧ್ಯೆ ಮಾತಿನ ಚಕಮಕಿ ನಡೆದು ಘರ್ಷಣೆಗೆ ಅವಕಾಶವಾಗುತ್ತಿದೆ. ಆದರೆ ತಮ್ಮ ಕಷ್ಟಗಳನ್ನು ಲೈನ್ ಮ್ಯಾನ್ ಬಳಿ ಮುಂದೆ ಹೇಳಿಕೊಂಡರೂ ಸಹಾಯ ಮಾಡುವ ಪರಿಸ್ಥಿತಿ ಇಲ್ಲದಂತಾಗಿದೆ.
ವಿದ್ಯುತ್ ಗ್ರಾಹಕರಿಂದ ಪ್ರತಿ ನಿತ್ಯ ಇಲಾಖೆ ನಿಗದಿಪಡಿಸಿದ ಹಣವನ್ನು ತರಲೇಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಚೆಸ್ಕಾಂ ಸಿಬ್ಬಂದಿ ಎದುರಿಸುತ್ತಿದ್ದು, ಇದರಿಂದಾಗಿ ಚೆಸ್ಕಾಂ ಸಿಬ್ಬಂದಿ ಹಾಗೂ ಗ್ರಾಹಕರ ನಡುವಿನ ಬಾಂಧವ್ಯ ಕೂಡ ಕಡಿಮೆಯಾಗುತ್ತಿದೆ. ಒಂದು ವೇಳೆ ನಿಗದಿತ ದಿನಾಂಕದಲ್ಲಿ ಗ್ರಾಹಕರಿಂದ ಬಾಕಿ ಉಳಿಸಿ ಕೊಂಡಿರುವ ವಿದ್ಯುತ್ ಬಿಲ್ ಹಣ ಸಂದಾಯವಾಗದಿದ್ದಲ್ಲಿ ಸಿಬ್ಬಂದಿ ಯನ್ನು ಅಮಾನತು ಮಾಡುವ ಆದೇಶವೂ ಬರುತ್ತಿದ್ದು, ಇದರಿಂದ ಚೆಸ್ಕಾಂನ ಸಿಬ್ಬಂದಿ ಒತ್ತಡದಲ್ಲಿ ಸಿಲುಕಿ ಗ್ರಾಹಕರೊಂದಿಗೆ ಜಗಳ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ವಾರಕ್ಕೆ ಎರಡು ಬಾರಿ ಕೇಂದ್ರ ವಲಯದಿಂದ ಆಗಮಿಸುತ್ತಿರುವ ಚೆಸ್ಕಾಂನ ಹಿರಿಯ ಅಧಿಕಾರಿಗಳು ಗೋಣಿಕೊಪ್ಪ ಕಚೇರಿಯಲ್ಲಿ ಅಧಿಕಾರಿಗಳ ಹಾಗೂ ಸಿಬ್ಬಂದಿಯು ಸಭೆ ನಡೆಸಿ ಒತ್ತಡ ಹೇರುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿರುವ ಕೆಲವು ಗ್ರಾಹಕರಿಗೆ
(ಮೊದಲ ಪುಟದಿಂದ) ನಿಗದಿತ ಸಮಯದಲ್ಲಿ ಇಲಾಖೆಯಿಂದ ವಿದ್ಯುತ್ ಬಿಲ್ ಸರಬರಾಜು ತಲಪದ ಹಿನೆÀ್ನಲೆಯಲ್ಲಿ ಗ್ರಾಹಕರ ಬಿಲ್ 30ರಿಂದ 40 ಸಾವಿರವರೆಗೆ ದಾಟಿದೆ. ಇದರಿಂದ ಸಹಜವಾಗಿಯೇ ಗ್ರಾಹಕರು ವಿದ್ಯುತ್ ಬಿಲ್ಲನ್ನು ಉಳಿಸಿಕೊಂಡಂತಾಗಿದೆ. ಈ ಹಣಕ್ಕೆ ಪ್ರತಿ ತಿಂಗಳು ಬಡ್ಡಿ ವಿಧಿಸುತ್ತಿರುವದರಿಂದ ಗ್ರಾಹಕರ ವಿದ್ಯುತ್ಚ್ಛಕ್ತಿ ಬಿಲ್ ಏರುತ್ತಲೇ ಇದೆ. ಇತ್ತೀಚೆಗೆ ರೈತರ ಸಂಕಷ್ಟ ಈ ಭಾಗದಲ್ಲಿ ಹೆಚ್ಚಾಗಿದ್ದರೂ ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿರುವ ಇಲಾಖೆ ಒಂದೇ ಸಮನೆ ಸಿಬ್ಬಂದಿಗೆ ಒತ್ತಡ ಹೇರುವ ಮೂಲಕ ಹಣ ವಸೂಲಾತಿಗೆ ಪಟ್ಟು ಹಿಡಿದಿದೆ. ಚೆಸ್ಕಾಂನ ಹಿರಿಯ ಅಧಿಕಾರಿಗಳು ಈಗಾಗಲೇ ಸಿಬ್ಬಂದಿಗೆ ನೋಟೀಸ್ ಜಾರಿ ಮಾಡಿದ್ದು ಅಂತಿಮ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ದ.ಕೊಡಗಿನ ಬಿರುನಾಣಿ ಭಾಗದಲ್ಲಿ ರೈತರು ವಿದ್ಯುತ್ ಬಿಲ್ಲನ್ನು ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ ಚೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಕಾರ್ಯಕ್ಕೆ ಮುಂದಾದಾಗ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ಬಿಲ್ ಕಟ್ಟಲಾಗುವದಿಲ್ಲವೆಂದು ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆಯು ನಡೆದಿದೆ. ರೈತ ಸಂಘವೂ ಪ್ರತಿಭಟಿಸಿದೆ. ಆದರೂ ಇಲಾಖೆ ಮಾತ್ರ ಬರಬೇಕಾದ ಬಾಕಿ ಹಣವನ್ನು ಸಂಗ್ರಹಿಸುವಲ್ಲಿ ಕಠಿಣ ನಿರ್ಧಾರ ಕೈಗೊಂಡಿದೆ.