ಸೋಮವಾರಪೇಟೆ, ನ. 20: ಲೋಕೋಪಯೋಗಿ ಇಲಾಖಾ ರಸ್ತೆಗಳ ವಾರ್ಷಿಕ ನಿರ್ವಹಣೆಗೆಂದು ಕೋಟ್ಯಾಂತರ ಹಣ ಮೀಸಲಾಗಿದ್ದು, ಕಾಮಗಾರಿಗಳನ್ನು ಗುರುತಿಸಿ ಕ್ರಿಯಾಯೋಜನೆಗೆ ಅನುಮೋದನೆ ಪಡೆದುಕೊಂಡಿದ್ದರೂ ಸಹ, ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಅಸಡ್ಡೆಯಿಂದ ಇನ್ನೂ ಕಾಮಗಾರಿ ಪ್ರಾರಂಭವಾಗಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಲೋಕೋಪಯೋಗಿ ಇಲಾಖೆಗೆ ಸೇರಿದ ಜಿಲ್ಲಾ ಮುಖ್ಯರಸ್ತೆಗಳಾದ ಗೋಪಾಲಪುರ-ಶನಿವಾರಸಂತೆ-ಹೆಬ್ಬಾಲೆ ರಸ್ತೆ, ಮಸಗೋಡು-ಯಲಕನೂರು-ಕಣಿವೆ ರಸ್ತೆ, ಮಾವಿನಕಟ್ಟೆ-ತಲ್ತರೆ-ಹರಗ ರಸ್ತೆ, ಸೋಮವಾರಪೇಟೆ-ಹಾನಗಲ್ಲು-ತಾಕೇರಿ-ಗರ್ವಾಲೆ ರಸ್ತೆ, ಮಾದಾಪುರ-ಸೂರ್ಲಬ್ಬಿ-ಶಾಂತಳ್ಳಿ ರಸ್ತೆ, ಕನ್ನಳ್ಳಿಕಟ್ಟೆ-ಬೀದಳ್ಳಿ-ಕುಂದಳ್ಳಿ ರಸ್ತೆಗಳನ್ನು ಮುಂಗಾರು ಪೂರ್ವದಲ್ಲಿ ದುರಸ್ತಿಗೊಳಿಸಲು ರೂ. 29 ಲಕ್ಷ ಹಾಗೂ ಮುಂಗಾರು ನಂತರದಲ್ಲಿ ದುರಸ್ತಿ ಕಾರ್ಯಕೈಗೊಳ್ಳಲು ರೂ. 50 ಲಕ್ಷಗಳನ್ನು ಮೀಸಲಿರಿಸಲಾಗಿದ್ದು, ಬಹುತೇಕ ರಸ್ತೆಗಳ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ.

ಇದರೊಂದಿಗೆ ಮುಂಗಾರು ಪೂರ್ವದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಕಾಡುಗಳನ್ನು ಕಡಿಯುವದು, ಮುಚ್ಚಿರುವ ಚರಂಡಿ ಸರಿಪಡಿಸುವದು, ಮೋರಿಗಳ ದುರಸ್ತಿ, ಡಬ್ಯ್ಲೂಎಂಎಂ ನಿಂದ ಗುಂಡಿಗಳನ್ನು ಮುಚ್ಚುವ ಕಾಮಗಾರಿಗಳು ನಡೆಯಬೇಕಿತ್ತು. ಆದರೆ ಈ ಕಾಮಗಾರಿಗಳನ್ನು ನಿರ್ವಹಿಸದೇ ಇರುವದರಿಂದ ರೂ. 29 ಲಕ್ಷಗಳನ್ನು ಗುಳುಂ ಮಾಡಲಾಗಿದೆಯೇ ಎಂಬ ಸಂಶಯವನ್ನು ಹುಟ್ಟುಹಾಕಿದೆ.

ಇನ್ನು ರಾಜ್ಯ ಹೆದ್ದಾರಿಯಾದ ಕೊಡ್ಲಿಪೇಟೆ-ಮಡಿಕೇರಿ (ವೀರಾಜಪೇಟೆ-ಬೈಂದೂರು) ರಸ್ತೆ, ಬಾಣಾವರ-ಕೂತಿ (ಬೆಂಗಳೂರು-ಜಾಲ್ಸೂರು) ರಸ್ತೆ, ಬೇಳೂರು-ಸೋಮವಾರಪೇಟೆ-ಕೂಡಿಗೆ ರಸ್ತೆ, ಹಿರಿಸಾವೆ-ಚೆಟ್ಟಳ್ಳಿ, ಮಡಿಕೇರಿ-ಕುಟ್ಟ, ಕೊಣನೂರು-ಮಾಕುಟ್ಟ ರಸ್ತೆಗಳಿಗೆ ರೂ. 2.36 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಒಂದು ಕಾಮಗಾರಿಯನ್ನು ಮಾತ್ರ ಪ್ರಾರಂಭಿಸಲಾಗಿದೆ.

ಮುಂಗಾರು ಪೂರ್ವದಲ್ಲಿ ಅಂದರೆ ಮಳೆಗಾಲ ಪ್ರಾರಂಭ ವಾಗುವದಕ್ಕೂ ಮುನ್ನ ರಸ್ತೆಯ ಬದಿಯಲ್ಲಿ ಕಾಡು ಕೊಚ್ಚುವದು, ಗುಂಡಿ ಮುಚ್ಚುವದು, ಚರಂಡಿ ನಿರ್ಮಾಣ, ಮೋರಿ ರಿಪೇರಿಯನ್ನು ಮಾಡಬೇಕಿದೆ. ಮುಂಗಾರು ನಂತರದಲ್ಲಿ ರಸ್ತೆಯ ಬದಿಯ ಶೋಲ್ಡರ್ಸ್ ಸರಿಪಡಿಸುವದು, ಗುಂಡಿಗಳನ್ನು ಡಾಂಬರಿನಿಂದ ಮುಚ್ಚುವದು, ರಸ್ತೆ ಬದಿಯ ಕಂಬ, ಮೋರಿ, ಸೇತುವೆ, ಮರಗಳಿಗೆ ಸುಣ್ಣಬಣ್ಣ ಬಳಿಯುವದು, ಕಿ.ಮೀ. ಕಲ್ಲುಗಳು ಮತ್ತು ರಸ್ತೆ ಸೂಚನಾ ಫಲಕಗಳನ್ನು ಸರಿಪಡಿಸುವ ಕಾಮಗಾರಿಗಳು ಒಳಗೊಂಡಿವೆ.

ಆದರೆ ಮುಂಗಾರು ಪೂರ್ವದಲ್ಲಿ ಯಾವದೇ ಕೆಲಸ ಮಾಡದೇ, ಮುಂಗಾರು ನಂತರ ಕೆಲವೊಂದು ಕಡೆಗಳಲ್ಲಿ ಮಾತ್ರ ಕಾಮಗಾರಿ ಪ್ರಾರಂಭಿ ಸಲಾಗಿದೆ.

ಇದೀಗ ಶನಿವಾರಸಂತೆ-ಸೋಮವಾರಪೇಟೆ ರಸ್ತೆಯ ಗೋಪಾಲಪುರದಲ್ಲಿ ಮಾತ್ರ ಗುಂಡಿಗಳನ್ನು ಮುಚ್ಚಲಾಗಿದ್ದು, ಕೆಲವೆಡೆ ಸುಣ್ಣ ಬಣ್ಣ ಬಳಿಯಲಾಗಿದೆ. ಮುಂಗಾರು ಪೂರ್ವದಲ್ಲಿ ಯಾವದೇ ಕಾಮಗಾರಿಯನ್ನು ಮಾಡದೇ ಗುತ್ತಿಗೆದಾರರು ಹಣ ಡ್ರಾ ಮಾಡಿಕೊಂಡಿದ್ದಾರೆಯೇ? ಎಂಬ ಬಗ್ಗೆ ತನಿಖೆ ನಡೆಯಬೇಕಿದೆ.

ಮಳೆಗಾಲದ ಮುಂಚಿನ ದಿನಗಳಲ್ಲಿ ಕಾಮಗಾರಿಗಳನ್ನು ನಡೆಸಿಲ್ಲ, ಇದೀಗ ಕೆಲವೆಡೆ ಕಾಮಗಾರಿ ಪ್ರಾರಂಭಿಸಲಾಗಿದೆ.

ಮುಂಗಾರು ಪೂರ್ವದ ಕಾಮಗಾರಿಗೆ ಮೀಸಲಿಟ್ಟ ಅನುದಾನವನ್ನು ಗುತ್ತಿಗೆದಾರರು ಹಾಗೂ ಅಭಿಯಂತರರ ಒಳ ಒಪ್ಪಂದದಿಂದ ದುರ್ಬಳಕೆ ಮಾಡಿಕೊಂಡಿರುವ ಸಂಶಯವಿದ್ದು, ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು ತನಿಖೆ ನಡೆಸಬೇಕೆಂದು ಮಾಹಿತಿ ಹಕ್ಕು ಕಾರ್ಯಕರ್ತ ಬಗ್ಗನ ಅನಿಲ್ ಒತ್ತಾಯಿಸಿದ್ದಾರೆ.

ಮೇಲಿನ ಕಾಮಗಾರಿಗಳಿಗೆ ಗುತ್ತಿಗೆದಾರರು ಟೆಂಡರ್ ಮೊತ್ತಕ್ಕಿಂತ ಶೇ. 25 ರಿಂದ 27 ರಷ್ಟು ಕಡಿಮೆ ನಮೂದು ಮಾಡಿದ್ದಾರೆ. ಕಳೆದ ಜೂನ್‍ನಲ್ಲಿಯೇ ಕ್ರಿಯಾಯೋಜನೆಗೆ ಅನುಮೋದನೆ ದೊರೆತಿದ್ದರೂ ಇಂದಿಗೂ ಕಾಮಗಾರಿ ಪ್ರಾರಂಭ ವಾಗಿಲ್ಲ ಎಂದು ಬಗ್ಗನ ಅನಿಲ್ ಆರೋಪಿಸಿದ್ದಾರೆ.