ನಾಪೋಕ್ಲು ನ. 18 : ಮಡಿಕೇರಿ ತಾಲೂಕಿನ ಎರಡನೆಯ ದೊಡ್ಡ ಪಟ್ಟಣವಾದ ನಾಪೋಕ್ಲುವಿನಲ್ಲಿ ಬಸ್ಸು ನಿಲ್ದಾಣವೇ ಇಲ್ಲ.ಇದು ಹತ್ತು ಹಲವು ಸಮಸ್ಯೆಗಳಿಗೆ ನಾಂದಿ ಹಾಡಿದೆ. ನಾಪೋಕ್ಲು ಮೂಲಕ ಸಂಚರಿಸುವ ಖಾಸಗಿ, ಸರ್ಕಾರಿ ಬಸ್ಸುಗಳಿಗೆ ಮೂರು ರಸ್ತೆಗಳ ಸಂಗಮ ಸ್ಥಳವೇ ಬಸ್ಸು ನಿಲ್ದಾಣವಾಗಿದ್ದು ವಾಹನಗಳ ದಟ್ಟಣೆಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಬವಣೆ ಪಡುವಂತಾಗಿದೆ. ಅದರಲ್ಲೂ ಸಂತೆಯ ದಿನವಾದ ಸೋಮವಾರದಂದು ಗ್ರಾಮಸ್ಥರು, ಜನಸಾಮಾನ್ಯರು ಟ್ರಾಫಿಕ್ ಕಿರಿಕಿರಿಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಜೊತೆಗೆ ವಾಹನ ಚಾಲಕರೂ ಪರದಾಡುವದು ತಪ್ಪಿಲ್ಲ.

ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವದು, ಅದಕ್ಕೆ ತಕ್ಕುದಾಗಿ ಪಟ್ಟಣದ ರಸ್ತೆಗಳು ವಿಸ್ತರಣೆಯಾಗದಿರುವದು ಟ್ರಾಫಿಕ್ ಕಿರಿಕಿರಿಗೆ ಮೂಲ ಕಾರಣ. ಈಗಾಗಲೇ ಇಲ್ಲಿನ ಅಪ್ಪಚ್ಚಕವಿ ರಸ್ತೆ ಹಾಗೂ ಮಾರುಕಟ್ಟೆ ಬಳಿಯ ರಸ್ತೆ ವಿಸ್ತರಣೆಯಾಗಿದ್ದರೂ ಪಟ್ಟಣದ ಮುಖ್ಯರಸ್ತೆ ವಿಸ್ತರಣೆ ಆಗಿಲ್ಲ ವಾಹನಗಳ ದಟ್ಟಣೆಯಿಂದ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತೆ ಮಾಡುತ್ತಿದೆ.

ರಸ್ತೆ ಬದಿಯಲ್ಲಿ ವಿದ್ಯಾರ್ಥಿಗಳು ಶಾಲಾ ಅವಧಿಯಲ್ಲಿ ನಡೆದು ಸಾಗುವದು ಸುಲಭದ ಮಾತಲ್ಲ. ಮುಖ್ಯ ರಸ್ತೆಯಲ್ಲಿ ಒಂದೇ ಸಲಕ್ಕೆ ಎರಡು ವಾಹನಗಳು ಬಂತೆಂದರೆ ಪಾದಚಾರಿಗಳು ಸಮಸ್ಯೆ ಅನುಭವಿಸುವದು ತಪ್ಪದು. ಕಿರಿದಾದ ರಸ್ತೆಯೂ ಸಂಚಾರ ಬಿಕ್ಕಟ್ಟಿಗೆ ಕಾರಣವಾಗಿದೆ. ಜೊತೆಗೆ ದುಸ್ಥಿತಿಯಲ್ಲಿರುವ ಗುಂಡಿ ಬಿದ್ದ ರಸ್ತೆಗಳು ಕಿರಿಕಿರಿ ಉಂಟುಮಾಡುತ್ತಿವೆ. ಮಾರುಕಟ್ಟೆ ಬಳಿಯ ರಸ್ತೆಯ ದುಸ್ಥಿತಿ ವಾಹನ ಚಾಲಕರು ಹಿಡಿಶಾಪ ಹಾಕುವಂತೆ ಮಾಡುತ್ತಿವೆ. ಸೋಮವಾರದ ದಿನ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳ ಕೃಷಿಕರು, ಕೂಲಿ ಕಾರ್ಮಿಕರು ವ್ಯಾಪಾರಕ್ಕಾಗಿ ಪಟ್ಟಣಕ್ಕೆ ಬರುತ್ತಾರೆ. ಜೊತೆಗೆ ಅಧಿಕ ಸಂಖ್ಯೆಯ ಖಾಸಗಿ ವಾಹನಗಳು ಪಟ್ಟಣದಲ್ಲಿ ಜಮಾಯಿಸುತ್ತವೆ. ಪ್ರತಿವಾರವೂ ಟ್ರಾಫಿಕ್ ಸಮಸ್ಯೆ ತಪ್ಪಿದ್ದಲ್ಲ.

ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಿದ್ದು ವ್ಯಾಪಾರ ವಹಿವಾಟು ಅಧಿಕ ಗೊಳ್ಳುತ್ತಿರುವ ನಾಪೋಕ್ಲು ಪಟ್ಟಣದಲ್ಲಿ ರಸ್ತೆಯ ವಿಸ್ತರಣೆಗೆ ಮೊದಲ ಆದ್ಯತೆ ನೀಡುವಂತಾಗಬೇಕು.ಜೊತೆಗೆ ವ್ಯವಸ್ಥಿತ ಬಸ್ಸು ನಿಲ್ದಾಣ ನಿರ್ಮಾಣವಾಗಬೇಕು ಎಂಬದು ನಾಗರಿಕರ ಬಹುದಿನದ ಬೇಡಿಕೆಯಾಗಿದೆ.