ಶ್ರೀಮಂಗಲ, ನ. 18: ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಯ ಕೆಲಸ ಕಾರ್ಯಗಳು ಸುಲಲಿತವಾಗಿ ಆಗಬೇಕಾದರೆ ಉತ್ತಮ ಕಟ್ಟಡ ಇರಬೇಕೆಂಬದನ್ನು ಮನಗಂಡು ಪ್ರಸ್ತುತ ಇರುವ ಆಡಳಿತ ಮಂಡಳಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿದೆ. ಈ ಕಟ್ಟಡಕ್ಕೆ ಸ್ಥಳದಾನ ಮಾಡಿದ ದಾನಿಗಳಾದ ಅಪ್ಪಚ್ಚಂಗಡ ಬೋಪಯ್ಯ ಹಾಗೂ ಮೋಟಯ್ಯರವರು ಅಭಿನಂದನಾರ್ಹರು ಎಂದು ಹೇಳಿದರು.ಈ ಹಿಂದೆ ದೆಹಲಿಯಿಂದ ಅನುದಾನ ಗ್ರಾಮ ಪಂಚಾಯಿತಿ ಮಟ್ಟಕ್ಕೆ ತಲುಪುವಾಗ ಶೇ. 20 ಮಾತ್ರ ಉಳಿಯುತ್ತದೆ ಎಂಬ ಮಾತಿತ್ತು ಆದರೆ ಈಗ ನೇರವಾಗಿ ಗ್ರಾಮ ಪಂಚಾಯಿತಿಗೆ 100ಕ್ಕೆ 100 ತಲುಪುವ ವ್ಯವಸ್ಥೆ ಆಗಿದೆ. ಈಗ ಜಿ.ಪಂ. ಹಾಗೂ ತಾ.ಪಂ ಗಳಿಗೆ ಬರುವ ಅನುದಾನ ದ್ವಿಗುಣವಾಗಿದೆ ಮುಂದಿನ ದಿನಗಳಲ್ಲಿ ವ್ಯವಸ್ಥೆಗೆ ಅನುಗುಣವಾಗಿ ಹೆಚ್ಚಿನ ಅನುದಾನ ಬರುವ ಸಾಧ್ಯತೆ ಇದೆ. ಅತಿವೃಷ್ಟಿಯಿಂದ (ಮೊದಲ ಪುಟದಿಂದ) ಹಾಳಾಗಿರುವ ರಸ್ತೆ ದುರಸ್ಥಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಸದ್ಯದಲ್ಲೆ ಕಾಮಗಾರಿ ನಡೆಸಲಾಗುವದು. ಕೊಣನೂರು - ಮಾಕುಟ್ಟ, ಕುಟ್ಟ - ಮಡಿಕೇರಿ ರಾಜ್ಯ ಹೆದ್ದಾರಿ ಎಂದು ಗುರುತಿಸಲಾಗಿದ್ದು 80 ಅಡಿ ಅಗಲದ ರಸ್ತೆ ಮುಂದಿನ ದಿನಗಳಲ್ಲಿ ಆಗಲಿದೆ. ಈ ಭಾಗದಲ್ಲಿ ಅತಿ ಹೆಚ್ಚು ಭಾರೀ ವಾಹನ ಸಂಚಾರವಿರುವದರಿಂದ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವ ಅವಶ್ಯಕತೆ ಹೆಚ್ಚು ಇದೆ. ರೈತರ ಒಂದು ಲಕ್ಷ ರೂ.ಗಳ ಸಾಲಮನ್ನ ಆಗಿದೆ. ಅತಿವೃಷ್ಟಿ ಪರಿಹಾರವು ಹಲವರಿಗೆ ಬಂದಿದೆ. ಆಧಾರ್ ಕಾರ್ಡ್ ಹಾಗೂ ಆರ್.ಟಿ.ಸಿ.ಯಲ್ಲಿ ನೋಂದಣಿಯಾಗಿರುವ ಹೆಸರಿನ ವ್ಯತ್ಯಾಸದಿಂದ ಹಲವರಿಗೆ ಪರಿಹಾರ, ಸಾಲಮನ್ನಾ ಹಾಗೂ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಹಣ ಬಂದಿರುವದಿಲ್ಲ. ರೈತರು ಈ ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಕೊಡಗಿನಲ್ಲಿ ಗ್ರಾ.ಪಂ. ಸದಸ್ಯರೆಲ್ಲರೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಹುತೇಕ ಎಲ್ಲಾ ಪಂಚಾಯಿತಿಗಳು ಸ್ವಂತ ಕಟ್ಟಡ ಹೊಂದಿವೆ. ಆದರೆ ಗ್ರಾ.ಪಂ.ಗೆ ಬರುವ ಅನುದಾನ ಅಲ್ಪಪ್ರಮಾಣವಾಗಿದ್ದು ಕೆಲಸ ಮಾಡಲು ಸಾಕಾಗುವದಿಲ್ಲ. ಜಿ.ಪಂ.ನಿಂದಲೂ ಗ್ರಾ.ಪಂ.ಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಈ ಕಟ್ಟಡ ನಿರ್ಮಾಣಕ್ಕೆ ನನ್ನ ಅನುದಾನದಲ್ಲಿ 3 ¯ಕ್ಷ ರೂ.ಗಳನ್ನು ನೀಡಿರುತ್ತೇನೆ. ಮುಂದಿನ ದಿನಗಳಲ್ಲಿ ಈ ಭಾಗದ ಗ್ರಾ.ಪಂ.ಗಳಿಗೆ ಹೆಚ್ಚಿನ ಅನುದಾನ ಒದಗಿಸುತ್ತೇನೆ. ಕೊಡಗಿನ ಶಾಸಕರಿಗೇ ಉಸ್ತುವಾರಿ ಸಚಿವ ಸ್ಥಾನ ನೀಡಿ ಕೊಡಗಿನ ಸಮಸ್ಯೆ ಪರಿಹರಿಸಲು ಸರಕಾರಗಳು ಕ್ರಮ ವಹಿಸಬೇಕೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಗ್ರಾ.ಪಂ. ಅಧ್ಯಕ್ಷ ಎಂ.ಎನ್. ಸುಮಂತ್ ಗ್ರಾ.ಪಂ.ನ ಕೆಲಸ ಕಾರ್ಯಗಳಿಗೆ ತಾ.ಪಂ. ಹಾಗೂ ಜಿ.ಪಂ. ಅಧಿಕಾರಿಗಳು ಸ್ಪಂದಿಸದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅವರ ವಿರುದ್ದ ಕ್ರಮಕೈಗೊಳ್ಳುವಂತೆ ತಾ.ಪಂ. ಅಧ್ಯಕ್ಷರು ಹಾಗೂ ಜಿ.ಪಂ. ಸದಸ್ಯರಲ್ಲಿ ಮನವಿ ಮಾಡಿದರು.
ಕಟ್ಟಡದ ನಿವೇಶನ ದಾನಿಗಳಾದ ಅಪ್ಪಚ್ಚಂಗಡ ಮೋಟಯ್ಯ ಮಾತನಾಡಿ ಪ್ರಸ್ತುತ ಅವಧಿಯ ಗ್ರಾ.ಪಂ. ಅಧ್ಯಕ್ಷರ ಮನವಿಗೆ ಸ್ಪಂದಿಸಿ ನಾನು ಹಾಗೂ ನನ್ನ ಸಹೋದರ ನೂತನ ಗ್ರಾ.ಪಂ. ಕಟ್ಟಡಕ್ಕೆ ನಿವೇಶನವನ್ನು ಉಚಿತವಾಗಿ ನೀಡಿರುತ್ತೇವೆ. ಉತ್ತಮ ಕಾರ್ಯವೊಂದಕ್ಕೆ ದಾನ ನೀಡಿರುವ ತೃಪ್ತಿ ಇದೆ ಎಂದ ಅವರು ಈ ಭಾಗದಲ್ಲಿರುವ ಕುಟ್ಟ ಅಥವಾ ಶ್ರೀಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಬೇಕು. ಸಾಲಮನ್ನಾ, ನೆರೆ ಪರಿಹಾರ ಹಾಗೂ ರಸ್ತೆ ಅಗಲೀಕರಣದ ¨ಗ್ಗೆ ನಿಯಮಾನುಸಾರ ಇರುವ ಮಾಹಿತಿಯನ್ನು ಜನರಿಗೆ ತಿಳಿಸಿ ಗೊಂದಲ ಪರಿಹರಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಜಿ.ಪಂ. ಸದಸ್ಯ ಮುಕ್ಕಾಟೀರ ಶಿವು ಮಾದಪ್ಪ ಮಾತನಾಡಿ, ತಮ್ಮ ವ್ಯಾಪ್ತಿಯ 3 ಗ್ರಾ.ಪಂ. ರಸ್ತೆ ಅಭಿವೃದ್ಧಿಗೆ ಶಾಸಕರಿಗೆ ಮನವಿ ಮಾಡಿದರು.
ವೀರಾಜಪೇಟೆ ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿ, ಅಧಿಕಾರ ವಿಕೇಂದ್ರಿಕರಣದ ಕಾರಣದಿಂದ ಸ್ಥಾಪನೆಯಾದ ಗ್ರಾ.ಪಂ. ಜನರೊಂದಿಗೆ ನೇರ ಸಂಪರ್ಕದಲ್ಲಿರುವದರಿಂದ ಎಲ್ಲರೂ ಗ್ರಾಮ ಸಭೆಯಲ್ಲಿ ಭಾಗಿಯಾಗಿ ಸರಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್ ಮಾತನಾಡಿ, ಟಿ. ಶೆಟ್ಟಿಗೇರಿಗೆ ಹೆಚ್ಚುವರಿ ಆರೋಗ್ಯ ಕಾರ್ಯಕರ್ತೆಯನ್ನು ನಿಯೋಜಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭ ಗ್ರಾ.ಪಂ ಕಟ್ಟಡ ನಿವೇಶನ ದಾನಿಗಳಾದ ಅಪ್ಪಚ್ಚಂಗಡ ಬೋಪಯ್ಯ, ಅಪ್ಪಚ್ಚಂಗಡ ಮೋಟಯ್ಯ ಹಾಗೂ ಕಟ್ಟಡ ಕಾಮಗಾರಿ ಗುತ್ತಿಗೆದಾ ರರಾದ ತಡಿಯಂಗಡ ಟಿ. ರಮೇಶ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ವೀರಾಜಪೇಟೆ ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತ ಪ್ರಕಾಶ್, ಸದಸ್ಯೆ ಪಿ.ಕೆ. ಸರೋಜ, ಎ.ಪಿ.ಎಂ.ಸಿ. ಸದಸ್ಯೆ ಬೊಳ್ಳಜೀರ ಸುಶೀಲ ಅಶೋಕ್ ಮಾಜಿ ಜಿ.ಪಂ. ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಕೆ. ಪೊನ್ನಪ್ಪ, ಟಿ. ಶೆಟ್ಟಿಗೇರಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಚ್ಚಮಾಡ ಮುತ್ತಪ್ಪ, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ, ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್, ಟಿ. ಶೆಟ್ಟಿಗೇರಿ ಗ್ರಾ.ಪಂ. ಉಪಾಧ್ಯಕ್ಷೆ ಕೆ.ಎಸ್. ಯಶೋಧ, ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಎಂ.ಎಲ್. ಕವಿತ ಪ್ರದೀಪ್, ಸದಸ್ಯರಾದ ಚೊಟ್ಟೆಯಾಂಡಮಾಡ ಉದಯ, ಮುಕ್ಕಾಟೀರ ಸಂದೀಪ್, ಚೆಟ್ಟಂಗಡ ರಂಜು ಕರುಂಬಯ್ಯ, ಪೆಮ್ಮಂಡ ಸಬಿತ ಕುಶಾಲಪ್ಪ, ಬಾಚೀರ ಶೈಲಾ ರಾಮು, ತಡಿಯಂಗಡ ಮೀನಾ ಹ್ಯಾರಿ, ಉಳುವಂಗಡ ಬೀನಾ ದತ್ತ, ಹೆಚ್. ಗೌರಿ, ಜೆ. ಕೆಚ್ಚಿ, ಹೆಚ್.ಎಂ. ಹರೀಶ್, ಪಿ.ಬಿ. ಚಂದ, ಕೆ.ಎಸ್. ಅಯ್ಯಪ್ಪ, ಜೆ.ಎಂ. ಸಿದ್ದ, ಪಿ. ದೇವಿ ಉಪಸ್ಥಿತರಿದ್ದರು.
ಟಿ. ಶೆಟ್ಟಿಗೇರಿ ಎಂ.ಎಂ. ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿ, ಪಂಚಾಯಿತಿ ಪಿ.ಡಿ.ಒ ಕವಿತ ಸ್ವಾಗತಿಸಿ, ಕೋಟ್ರಂಗಡ ಮನು ಸೋಮಯ್ಯ ನಿರೂಪಿಸಿ ವಂದಿಸಿದರು.