ಮಡಿಕೇರಿ, ನ. 19 : ವೀರಾಜಪೇಟೆ ಪಟ್ಟಣದ ರಸ್ತೆ ಅಗಲೀಕರಣ ವಿಚಾರದಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಅವೈಜ್ಞಾನಿಕ ರಸ್ತೆ ಅಗಲೀಕರಣ ವಿರೋಧಿ ಸಮಿತಿ, ರಸ್ತೆ ಅಗಲೀಕರಣ ಸಂಬಂಧ ಸರ್ವೋಚ್ಚ ನ್ಯಾಯಾಲಯ ನೀಡಿರುವ ನಿರ್ದೇಶನದ ಅನ್ವಯ ಸಂತ್ರಸ್ತರಿಗೆ ಪರಿಹಾರ ನೀಡುವದಾದಲ್ಲಿ ಮಾತ್ರ ರಸ್ತೆ ಅಗಲೀರಣಕ್ಕೆ ಸಮ್ಮತಿ ನೀಡುವದಾಗಿ ಘೋಷಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮುಖಂಡ ವಕೀಲ ಟಿ.ಪಿ.ಕೃಷ್ಣ ಹಾಗೂ ಡಾ. ಇ.ರ. ದುರ್ಗಾಪ್ರಸಾದ್ ಅವರುಗಳು, ವೀರಾಜಪೇಟೆ ಪಟ್ಟಣದ ರಸ್ತೆ ಅಗಲೀಕರಣದ ವಿಚಾರದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಇವರ ವರ್ತನೆಗೆ ಕ್ಷೇತ್ರದ ಶಾಸಕರೂ ಬೆಂಬಲ ನೀಡುತ್ತಿರುವದು ವಿಪರ್ಯಾಸ ಎಂದು ಟೀಕಿಸಿದರು.
ಕೊಣನೂರು-ಮಾಕುಟ್ಟ ಹೆದ್ದಾರಿಯು ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯಾಗಿದ್ದು, ಇದನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯೂ ಅದೇ ಇಲಾಖೆಗೆ ಸೇರಿದ್ದಾಗಿದೆ. ಆದರೆ ಪಟ್ಟಣ ಪಂಚಾಯಿತಿಯು ಏಕಾಏಕಿ ಈ ರಸ್ತೆಯ ಅಭಿವೃದ್ಧಿ ಸಂಬಂಧ ಸಭೆಯೊಂದನ್ನು ನಡೆಸಿ ರಸ್ತೆ ಅಗಲೀಕರಣಕ್ಕೆ ಏಕಪಕ್ಷೀಯವಾದ ತೀರ್ಮಾನವನ್ನು ಕೈಗೊಂಡಿರುವದನ್ನು ಗಮನಿಸಿದರೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಪಟ್ಟಣದ ಅಭಿವೃದ್ಧಿಗಿಂತಲೂ ರಸ್ತೆ ಅಭಿವೃದ್ಧಿಗೆ ಬರುವ ಅನುದಾನದ ಮೇಲೆ ಹೆಚ್ಚಿನ ಕಾಳಜಿ ಇರುವಂತೆ ಭಾಸವಾಗುತ್ತಿದೆ ಎಂದು ಆರೋಪಿಸಿದರು.
ವೀರಾಜಪೇಟೆಯ ಸುಂಕದ ಕಟ್ಟೆಯಿಂದ ಮಲಬಾರ್ ರಸ್ತೆಯ ಕೊನೆಯವರಿಗಿನ ರಸ್ತೆಯ ಎರಡೂ ಬದಿಗಳಲ್ಲಿ ನೂರಾರು ವರ್ಷಗಳಿಂದ ವಾಸ ಮಾಡಿಕೊಂಡು ಬಂದಿರುವ ನಿವಾಸಿಗಳಿದ್ದು, ರಸ್ತೆ ಅಗಲೀಕರಣ ಸಂದರ್ಭ ಅನೇಕ ಮಂದಿ ಮನೆಗಳನ್ನು ಕಳೆದುಕೊಳ್ಳಲಿದ್ದಾರೆ. ಮನೆ ಕಳೆದುಕೊಳ್ಳಲಿರುವ ಸಂತ್ರಸ್ತರಿಗೆ ನಿಯಮಾನುಸಾರ ಪರಿಹಾರ ನೀಡುವಂತೆ ಕೇಳಿದರೆ, ‘ಇದಕ್ಕೆ ಹಣವಿಲ್ಲ’ ಎಂಬ ಉತ್ತರ ನೀಡುತ್ತಿದ್ದಾರೆ. ಆದರೆ ಸವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ರಸ್ತೆ ಅಗಲೀಕರಣ ಮಾಡುವ ಸಂದರ್ಭ ನಿಯಮಾನುಸಾರ ಭೂಸ್ವಾಧೀನ ಪ್ರಕ್ರಿಯೆ ನಡೆಸಿ ಭೂಮಿಯ ಮೌಲ್ಯದ ಮೂರು ಪಟ್ಟು ಪರಿಹಾರ ನೀಡಬೇಕಿದೆ ಎಂದು ವಿವರಿಸಿದರು.
ಪಟ್ಟಣ ಪಂಚಾಯಿತಿಯ ಸರ್ವಾಧಿಕಾರಿ ಧೋರಣೆಯ ವಿರುದ್ಧ ಈಗಾಗಲೇ ಹಲವು ಮಂದಿ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದು, ಸೋಮವಾರ ಮತ್ತಷ್ಟು ಮಂದಿ ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯದ ಮೂಲಕ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.
ಅಗಲೀಕರಣವೊಂದೇ ಅಭಿವೃದ್ಧಿಯಲ್ಲ: ಅಧಿಕಾರಿಗಳ ಪ್ರಕಾರ ರಸ್ತೆ ಅಗಲೀಕರಣ ಎಂದರೆ ಅಭಿವೃದ್ಧಿ ಎನ್ನುವಂತಿದೆ. ಆದರೆ ಅದೊಂದೇ ಅಭಿವೃದ್ಧಿಯಲ್ಲ; ಮನುಷ್ಯನ ಜೀವನ ಮಟ್ಟ ಸುಧಾರಣೆಗೆ ಒತ್ತು ನೀಡುವದೇ ನಿಜವಾದ ಅಭಿವೃದ್ಧಿ ಎಂದು ಪ್ರತಿಪಾದಿಸಿದ ಅವರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆ ಅಗಲೀಕರಣದ ಬಗ್ಗೆ ತೋರುವ ಕಾಳಜಿಯ ಅರ್ಧದಷ್ಟನ್ನು ಪಟ್ಟಣದ ಇತರ ಸಮಸ್ಯೆಗಳ ಪರಿಹಾರಕ್ಕೆ ನೀಡಿದಲ್ಲಿ ರಸ್ತೆ ಅಗಲೀಕರಣದ ಅಗತ್ಯವೇ ಇಲ್ಲ ಎಂದು ಹೇಳಿದರು.
ಪಟ್ಟಣದಲ್ಲಿ ಈಗಾಗಲೇ ಒಂದು ಬಾರಿ ರಸ್ತೆ ಅಗಲೀಕರಣವಾಗಿದ್ದು, ಆ ಸಂದರ್ಭ ಈ ರಸ್ತೆಯ ಎರಡೂ ಬದಿಯ ಜನತೆ ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟುಕೊಡುವ ಮೂಲಕ ಸಹಕರಿಸಿದ್ದಾರೆ. ಆದರೆ ಇದೀಗ ಮತ್ತೊಮ್ಮೆ ರಸ್ತೆ ಅಗಲೀಕರಣಕ್ಕೆ ಜಾಗ ನೀಡಿದರೆ ಅನೇಕರು ಮನೆಗಳನ್ನು ಕಳೆದುಕೊಂಡು ಬೀದಿಪಾಲಾಗಬೇಕಾಗುತ್ತದೆ. ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಪಟ್ಟಣದಲ್ಲಿ ಆಟೋ ರಿಕ್ಷಾಗಳ ಮಿತಿ ಮೀರಿದ ಹೆಚ್ಚಳ, ವಿವಿಧೆಡೆಗಳಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶದ ಕೊರತೆ, ವಾಹನ ಸವಾರರ ಅಡ್ಡಾದಿಡ್ಡಿ ಸಂಚರಿಸುವ ಕಾರಣದಿಂದ ಉಂಟಾಗುತ್ತಿರುವ ಟ್ರಾಫಿಕ್ ಜಾಮ್, ರಸ್ತೆಗಳ ಗುಂಡಿ ಮುಚ್ಚದಿರುವದು, ಮಳೆ ನೀರು ಸುಗಮವಾಗಿ ಹಾದು ಹೋಗಲು ಜಾಗವಿಲ್ಲದಿರುವದು, ಟ್ರಾಫಿಕ್ ನಿಯಂತ್ರಣ ಮಾಡುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪೊಲೀಸರ ವೈಫಲ್ಯ, ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಜನಪ್ರತಿನಿಧಿಗಳು ಎಡವಿರುವದು, ಮುಖ್ಯ ರಸ್ತೆಯಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಅಡ್ಡಾ ದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುತ್ತಿರುವದು ಮುಂತಾದವುಗಳೇ ಪಟ್ಟಣದ ಟ್ರಾಫಿಕ್ ಸಮಸ್ಯೆಗೆ ಕಾರಣವೇ ಹೊರತು ರಸ್ತೆಯ ಅಗಲ ಕಿರಿದಾಗಿರುವದರಿಂದಲ್ಲ ಎಂದು ಅವರುಗಳು ವಿವರಿಸಿದರು.
ಇತ್ತೀಚೆಗಷ್ಟೇ ಪಟ್ಟಣದಲ್ಲಿ ಸುಮಾರು 5.50ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲಾಗಿದ್ದು, ಇದೀಗ ರಸ್ತೆ ಅಗಲೀಕರಣವಾದಲ್ಲಿ ಕಂಬಗಳನ್ನು ಮತ್ತೆ ಸ್ಥಳಾಂತರಿಸಲು ಕೋಟ್ಯಂತರ ರೂ. ವೆಚ್ಚ ಮಾಡಬೇಕಾಗಿದ್ದು, ಜನರ ಬೆವರಿನ ಹಣವನ್ನು ಈ ರೀತಿ ಪೋಲು ಮಾಡುವದು ಸರಿಯೇ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮುಖಂಡ ನೆಲ್ಲಮಕ್ಕಡ ಎ.ಗಣಪತಿ ಉಪಸ್ಥಿತರಿದ್ದರು.